ಪ್ರೀತಿಸಿ ಮದ್ವೆಯಾದ ಜೋಡಿಗೆ ಎಂಎಲ್‍ಎ ಆಪ್ತನಿಂದ ಕಿರುಕುಳ

ಬೆಂಗಳೂರು: ಪ್ರೀತಿ ಮಾಡಿ ಇಬ್ಬರು ಒಪ್ಪಿ ಮದುವೆನೂ ಆಗಿದ್ದಾರೆ. ಆದರೆ ಎಂಎಲ್‍ಎ ಆಪ್ತನೊಬ್ಬ ಈ ಪ್ರೇಮಿಗಳಿಗೆ ವಿಲನ್ ಆಗಿದ್ದಾನೆ. ತನ್ನ ಪಟಾಲಂ ಬಿಟ್ಟು ಕಿರುಕುಳ ಕೊಡುತ್ತಿದ್ದಾನೆ. ರಕ್ಷಣೆ ಕೋರಿ ಪೊಲೀಸ್ ಮೊರೆ ಹೋದ್ರೂ ಯಾವುದೇ ಉಪಯೋಗವಿಲ್ಲ.

ರಂಜಿನಿ(ಹೆಸರು ಬದಲಾಯಿಸಲಾಗಿದೆ) ಮತ್ತು ಕಿಶೋರ್ ಪ್ರೀತಿಸಿ ಮದುವೆಯಾದ ಪ್ರೇಮಿಗಳು. ಇಬ್ಬರೂ ಕೆಂಗೇರಿಯ ಕಾಲೇಜೊಂದರಲ್ಲಿ ಓದುವಾಗಲೇ ಪ್ರೀತಿ ಚಿಗುರಿತ್ತು. ನಂತರ ಮನೆಯವರನ್ನು ಒಪ್ಪಿಸುವ ಪ್ರಯತ್ನ ಕೂಡ ಮಾಡಿದ್ದರು. ಆದರೆ ಮನೆಯವರು ಒಪ್ಪದಿದ್ದಾಗ ಸ್ನೇಹಿತರ ಸಹಾಯದಿಂದ ಮದುವೆಯಾಗಿ ಹೊಸ ಜೀವನ ಶುರು ಮಾಡ ಹೊರಟಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ.

ರಂಜಿನಿ ಜಾತಿ ಮತ್ತು ಅಂತಸ್ತು ನಮಗೆ ಸರಿ ಹೋಗಲ್ಲ ಎಂದು ಕಿಶೋರ್ ಪೋಷಕರು ಅವರ ಪ್ರೀತಿಯನ್ನು ನಿರಾಕರಿಸಿದ್ದರು. ನಂತರ ವಿಧಿಯಿಲ್ಲದೇ ರಂಜಿನಿಗೆ ಅವರ ಪೋಷಕರು ಬೇರೊಂದು ಮದುವೆ ಸಹ ಮಾಡಿದ್ದರು. ಆದರೆ ಆಕೆ ಕಿಶೋರ್ ನನ್ನು ಮರೆಯಲು ಸಾಧ್ಯವಾಗದೇ ಡಿವೋರ್ಸ್ ಪಡೆದುಕೊಂಡು, ನಂತರ ಕಿಶೋರ್ ನನ್ನು ಮದುವೆಯಾದಳು. ಮದುವೆಯಾಗಿ ಮೂರೇ ತಿಂಗಳಿಗೆ ಸಂಬಂಧಿ ರಾಮೋಹಳ್ಳಿಯ ಪಂಚಾಯ್ತಿಯ ಮಾಜಿ ಅಧ್ಯಕ್ಷ, ಸ್ಥಳೀಯ ಕಾಂಗ್ರೆಸ್ ನಾಯಕ, ಶಾಸಕ ಎಸ್.ಟಿ ಸೋಮಶೇಖರ್ ಆಪ್ತ ಲಕ್ಷ್ಮಣ್, ಕಿಶೋರ್ ನನ್ನು ತನ್ನ ಬಳಿಯೇ ಬಂಧಿಯಾಗಿಸಿಕೊಂಡಿದ್ದರು. ರಂಜಿನಿ ಎಷ್ಟೇ ಪ್ರಯತ್ನ ಪಟ್ಟರು ಕಿಶೋರ್ ನನ್ನ ಹುಡುಕಲು ಸಾಧ್ಯವಾಗಿರಲಿಲ್ಲ. ಕಡೆಗೆ 6 ತಿಂಗಳ ನಂತರ ಕಿಶೋರ್ ಮಾವ ಲಕ್ಷ್ಮಣ್ ನಿಂದ ತಪ್ಪಿಸಿಕೊಂಡು ಬಂದು ತನ್ನ ಪತ್ನಿಯನ್ನು ಮತ್ತೆ ಸೇರಿದ್ದಾನೆ. ಆದರೂ ಇವರನ್ನು ಬದುಕಲು ಬಿಡದೇ ಮನೆ ಬಳಿಗೆ ಪುಂಡರನ್ನು ಕಳುಹಿಸಿ ಬೆದರಿಕೆ ಹಾಕುತ್ತಿದ್ದಾರೆ ಅಂತ ಅವರು ಆರೋಪಿಸಿದ್ದಾರೆ.

ಶಾಸಕ ಎಸ್.ಟಿ ಸೋಮಶೇಖರ್ ಆಪ್ತ ಎನ್ನುವ ಕಾರಣಕ್ಕೆ ಪೊಲೀಸರು ಸಹ ಈ ಪ್ರೇಮಿಗಳಿಗೆ ರಕ್ಷಣೆ ಕೊಡುತ್ತಿಲ್ಲ. ಕೂಡಲೇ ಪೊಲೀಸ್ ಅಧಿಕಾರಿಗಳು ಬೆದರಿಕೆ ಹಾಕುವವರ ವಿರುದ್ಧ ಕ್ರಮ ತೆಗೆದುಕೊಂಡು ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ ಎಂದು ಪ್ರೇಮಿಗಳು ಒತ್ತಾಯಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *