ಪರಿಷತ್ ಚುನಾವಣೆ – ಬಳ್ಳಾರಿಯಿಂದ ಟಿಕೆಟ್ ಪಡೆಯಲು ದೆಹಲಿಯಲ್ಲಿ ಕೈ ನಾಯಕರು ಲಾಬಿ

ನವದೆಹಲಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆ ಕಾವು ಹೆಚ್ಚಾಗುತ್ತಿದೆ. ಕಾಂಗ್ರೆಸ್‍ನಿಂದ ಟಿಕೆಟ್ ಪಡೆಯಲು ಅಭ್ಯರ್ಥಿಗಳು ಸಾಕಷ್ಟು ಪ್ರಯತ್ನ ಆರಂಭಿಸಿದ್ದಾರೆ. ಬಳ್ಳಾರಿಯಿಂದ ಟಿಕೆಟ್‍ಗಾಗಿ ಮುಂಡರಗಿ ನಾಗರಾಜ್ ಬಾರಿ ಪ್ರಯತ್ನ ನಡೆಸಿದ್ದಾರೆ.

ಮುಂಡರಗಿ ನಾಗರಾಜ್ ಪರವಾಗಿ ದೆಹಲಿಯಲ್ಲಿ ಲಾಬಿ ಶುರುವಾಗಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಮಾಜಿ ಸಚಿವ ಸಂತೋಷ್ ಲಾಡ್ ಭೇಟಿಯಾಗಿದ್ದು, ದಲಿತ ಎಡ ಸಮುದಾಯದ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಮುಂಡರಗಿ ನಾಗರಾಜ್ ಟಿಕೇಟ್ ನೀಡುವಂತೆ ಮಾಜಿ ಕೇಂದ್ರ ಸಚಿವ ಕೆ.ಹೆಚ್ ಮುನಿಯಪ್ಪ ಸೇರಿದಂತೆ ಹಲವು ಎಡ ಸಮುದಾಯದ ನಾಯಕರು ನೀಡಿರುವ ಶಿಫಾರಸು ಪತ್ರದೊಂದಿಗೆ ಸೋನಿಯಾಗಾಂಧಿ ಭೇಟಿ ಮಾಡಿರುವ ಸಂತೋಷ್ ಲಾಡ್ ಟಿಕೆಟ್‍ಗಾಗಿ ಬಿಗಿ ಪಟ್ಟು ಹಿಡಿದಿದ್ದಾರೆ.

ಇನ್ನು ಮತ್ತೊಂದು ಕಡೆ ಬಳ್ಳಾರಿಯಿಂದ ಕೆ.ಸಿ ಕೊಂಡಯ್ಯಗೆ ಟಿಕೆಟ್ ನೀಡುವಂತೆ ಮತ್ತೊಂದು ಬಣ ಒತ್ತಾಯಿಸಿದೆ. ಈಗಾಗಲೇ ಎರಡು ಬಾರಿ ಪರಿಷತ್ ಸದಸ್ಯರಾಗಿರುವ ಕೊಂಡಯ್ಯ ಅವರಿಗೆ ಟಿಕೆಟ್ ನೀಡುವಂತೆ ಸ್ಥಳೀಯ ನಾಯಕರು ಒತ್ತಾಯಿಸಿದ್ದಾರೆ. ಕೆ.ಸಿ ಕೊಂಡಯ್ಯ ಅವರಿಗೆ ಹಿರಿಯ ನಾಯಕ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬೆಂಬಲ ಇದೆ ಎನ್ನಲಾಗಿದೆ. ಇದನ್ನೂ ಓದಿ: ಸೋನಿಯಾಗಾಂಧಿ ಭೇಟಿಯಾದ ಡಿಕೆಶಿ – ಸಂಜೆ ವೇಳೆಗೆ ಕಾಂಗ್ರೆಸ್‍ನಿಂದ ಅಭ್ಯರ್ಥಿಗಳ ಘೋಷಣೆ

ಈ ಸಂಬಂಧ ದೆಹಲಿಯಲ್ಲಿ ಮಾತನಾಡಿರುವ ಸಂತೋಷ್ ಲಾಡ್, ಬಳ್ಳಾರಿಯಿಂದ ಮುಂಡರಗಿ ನಾಗರಾಜ್ ಅವರಿಗೆ ಟಿಕೆಟ್ ಕೊಡಿಸಲು ಪ್ರಯತ್ನ ಮಾಡುತ್ತಿದ್ದೇವೆ. ಎಡ ಸಮುದಾಯ ಬಳ್ಳಾರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಿಂದೆ ನಾವು ಅವರಿಗೆ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದೆವು. ಈ ಹಿನ್ನಲೆಯಲ್ಲಿ ಹೈಕಮಾಂಡ್ ಗೆ ಮನವಿ ಮಾಡುತ್ತಿದ್ದೇವೆ, ಸೋನಿಯಾಗಾಂಧಿ ಸೇರಿ ಎಲ್ಲ ನಾಯಕರನ್ನು ಭೇಟಿ ಮಾಡಿ ಮನವಿ ಮಾಡಿದೆ. ರಾಜ್ಯದ ಎಡ ಸಮುದಾಯದ ಎಲ್ಲ ನಾಯಕರು ಬೆಂಬಲಿಸಿದ್ದಾರೆ ಎಂದರು.

Comments

Leave a Reply

Your email address will not be published. Required fields are marked *