ಗಂಭೀರ ಸಭೆಯಲ್ಲಿ ಬೇಜವಾಬ್ದಾರಿ ತೋರಿದ ಮಂತ್ರಿಗೆ ಶಾಸಕ ದೇವಾನಂದ ಚವ್ಹಾಣ್ ಕ್ಲಾಸ್!

ವಿಜಯಪುರ: ಕೆಡಿಪಿ ಸಭೆಯಲ್ಲಿ ಫೋನಿನಲ್ಲಿ ಹರಟೆ ಹೊಡೆಯುತ್ತಾ ಬೇಜವಾಬ್ದಾರಿ ಪ್ರದರ್ಶಿಸಿದ ಜಿಲ್ಲಾ ಉಸ್ತವಾರಿ ಹಾಗೂ ಕೈಗಾರಿಕಾ ಮಂತ್ರಿ ಎಂ.ಸಿ ಮನಗೋಳಿ ಅವರನ್ನು ನಾಗಠಾಣ ಶಾಸಕ ದೇವಾನಂದ ಚವ್ಹಾಣ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ತಾವೇ ಸ್ವತಃ ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿ ಹಿಡಿದು ಶಾಸಕ ದೇವಾನಂದ್ ಚವ್ಹಾಣ್ ಜನರಿಂದ ಭೇಷ್ ಎನಿಸಿಕೊಂಡಿದ್ದರು. ಈಗ ಸಭೆಯಲ್ಲಿ ಮಂತ್ರಿಗಳನ್ನೇ ತರಾಟೆಗೆ ತೆಗೆದುಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಇಂದು ನಡೆದ ಕೆಡಿಪಿ ಸಭೆಯಲ್ಲಿ ಫೋನಿನಲ್ಲಿ ಹರಟೆ ಹೊಡೆಯುತ್ತಿದ್ದ ವಿಜಯಪುರ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಸಖತ್ ಕ್ಲಾಸ್ ತೆಗೆದುಕೊಳ್ಳುವ ಮೂಲಕ ರೆಬಲ್ ಸ್ಟೈಲ್ ಪ್ರದರ್ಶಿಸಿದ್ದಾರೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬರಗಾಲದ ಕುರಿತಾಗಿ ಗಂಭೀರ ಚರ್ಚೆ ನಡೆಯುತ್ತಿತ್ತು. ಈ ವೇಳೆ ಸಚಿವ ಎಂ.ಸಿ ಮನಗೂಳಿ ಫೋನ್ ಸಂಭಾಷಣೆಯಲ್ಲಿ ನಿರತರಾಗಿದ್ದರು. ಇದನ್ನು ಕಂಡು ದೇವಾನಂದ ಅವರು ಸಿಡಿದೆದ್ದರು.

ಸಭೆಯಲ್ಲಿ ಬರಗಾಲದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಇದಕ್ಕೆ ಪರಿಹಾರ ಹುಡುಕಬೇಕಾದ ನೀವೇ ಫೋನಿನಲ್ಲಿ ಮಾತನಾಡುತ್ತಾ ಕುಳಿತರೆ ಹೇಗೆ ಎಂದು ಸಖತ್ ಕ್ಲಾಸ್ ತೆಗೆದುಕೊಂಡರು. ಒಂದು ಕಡೆಗೆ ಶಾಸಕರೊಬ್ಬರು ಮಂತ್ರಿಗಳನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದರೆ ಇನ್ನೊಂದೆಡೆ ಅಧಿಕಾರಿ ವರ್ಗ ಒಂದು ಕ್ಷಣ ಆಶ್ಚರ್ಯದಿಂದ ನೋಡುತ್ತಾ ಕುಳಿತಿತ್ತು.

ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದೆ. ನಾನು ಬರಗಾಲ ಪರಿಹಾರ ಕ್ರಮಕ್ಕಾಗಿ ಡಾಕ್ಯುಮೆಂಟ್ ರೆಡಿಮಾಡಿಕೊಂಡು ಬಂದಿದ್ದರೆ, ನೀವು ಫೋನಿನಲ್ಲಿ ಮಾತನಾಡ್ತಾ ನಿರ್ಲಕ್ಷ್ಯ ತೋರುವುದು ಎಷ್ಟು ಸರಿ ಎಂದು ಶಾಸಕ ದೇವಾನಂದ್ ಅವರು ಪ್ರಶ್ನಿಸಿದಾಗ ಸಚಿವರು ತುಟಿಕ್ ಪಿಟಿಕ್ ಎನ್ನದೆ ನಂತರ ಸಭೆ ವಿಚಾರದಲ್ಲಿ ಮಗ್ನರಾದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *