ಧಾರವಾಡ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ್ ಅವರ ಆಪ್ತ ಪ್ರೇಮ ವಿವಾಹವಾದ ತನ್ನ ಮಗಳು ಮತ್ತು ಆಕೆಯ ಪ್ರಿಯಕರನ ಮೇಲೆ ಬೆದರಿಕೆಯೊಡ್ಡಿದ ಪ್ರಕರಣ ಬೆಳಕಿಗೆ ಬಂದಿದೆ.
ಶಿವರಾಮ್ ಹೆಬ್ಬಾರ್ ಆಪ್ತ ಕಮಲಾಕಾಂತ್ ನಾಯಕನ ಮಗಳು ಯೋಗಿತಾ ಯಲ್ಲಾಪುರದ ಮಳ್ಯಾನಕೊಪ್ಪದ ವಿನಾಯಕ ಮಂಡಗೊಡ್ಲಿನೊಂದಿಗೆ ಪ್ರೀತಿಸುತ್ತಿದ್ದಳು. ಈ ಪ್ರೀತಿಗೆ ಹುಡುಗಿಯ ಪೋಷಕರ ಬೆಂಬಲ ಸಿಕ್ಕಿರಲಿಲ್ಲ. ನಾವು ಕಾಣಿಸಿಕೊಂಡರೆ ನಮ್ಮ ಮೇಲೆ ಹಲ್ಲೆ ನಡೆಸಬಹುದು ಎಂದು ಜೋಡಿ ಊರನ್ನು ಬಿಟ್ಟಿತ್ತು.
ಮಗಳು ಯೋಗಿತಾ ಊರಿನಿಂದ ನಾಪತ್ತೆಯಾದ ಹಿನ್ನೆಲೆಯಲ್ಲಿ ಕಮಾಲಾಕಾಂತ್ ವಿನಾಯಕ್ ಮೇಲೆ ಕಿಡ್ನಾಪ್ ಕೇಸ್ ದಾಖಲಿಸಿದ್ದಾರೆ. ಅಲ್ಲದೇ ಶಾಸಕ ಹೆಬ್ಬಾರ್ ಹೆಸರು ಬಳಸಿಕೊಂಡು ಪೊಲೀಸರಿಂದ ವಿನಾಯಕನ ಮನೆಯವರಿಗೆ ತೊಂದರೆ ಕೊಡುತ್ತಿದ್ದಾರೆ.

ಸದ್ಯ ಇದರಿಂದ ರೋಸಿ ಹೋಗಿರುವ ಯೋಗಿತಾ ಹಾಗೂ ವಿನಾಯಕ ಕಳೆದ ಎರಡು ವಾರಗಳಿಂದ ಅಲ್ಲಲ್ಲಿ ಸುತ್ತಾಡಿ ಈಗ ಧಾರವಾಡಕ್ಕೆ ಆಗಮಿಸಿ ಧಾರವಾಡ ಉಪನೊಂದಣಾಧಿಕಾರಿ ಕಚೇರಿಯಲ್ಲಿ ರಿಜಿಸ್ಟರ್ ವಿವಾಹವಾಗಿದ್ದಾರೆ. ಈಗ ನಾವು ರಕ್ಷಣೆಗಾಗಿ ಪೊಲೀಸ್ ಠಾಣೆಗೆ ಹೋದರೂ ಕೂಡ ನಮಗೆ ರಕ್ಷಣೆ ಸಿಗುವ ಭರವಸೆ ಇಲ್ಲ. ನಮಗೆ ರಕ್ಷಣೆ ನೀಡಿ ಎಂದು ಅಂಚೆ ಮೂಲಕವೇ ಉತ್ತರ ಕನ್ನಡ ಎಸ್‍ಪಿಗೆ ಲಿಖಿತ ದೂರು ರವಾನಿಸಿದ್ದಾರೆ.
ನಮಗೆ ನೆಮ್ಮದಿಯಿಂದ ಬದುಕಲು ಬಿಡಿ ಎಂದು ಬೇಡುತ್ತಿರುವ ಈ ಪ್ರೇಮಿಗಳು ನನ್ನ ಹಿಂದೆ ಶಾಸಕ ಶಿವರಾಮ ಹೆಬ್ಬಾರ ಇದ್ದಾರೆ ಎನ್ನುವುದನ್ನು ಮುಂದಿಟ್ಟುಕೊಂಡು ನಮ್ಮ ತಂದೆ ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಎಲ್ಲಿಗೆ ಹೋದರೂ ಬಿಡುತ್ತಿಲ್ಲ. ಶಾಸಕ ಎನ್ನುವ ಕಾರಣಕ್ಕೆ ಪೊಲೀಸರು ಕೂಡ ನಮ್ಮ ನೆರವಿಗೆ ಬರುತ್ತಿಲ್ಲ ಎಂದು ಯೋಗಿತಾ ಆರೋಪಿಸಿದ್ದಾಳೆ.
ನಾನು ಮನಸಾರೆ ಒಪ್ಪಿಕೊಂಡೇ ವಿನಾಯಕನ ಜೊತೆ ಬಂದಿದ್ದೇನೆ. ಆರು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದೇವೆ. ಆದರೆ ಇದು ನಮ್ಮ ತಂದೆಗೆ ಇಷ್ಟವಿಲ್ಲ. ಅದಕ್ಕಾಗಿ ನನ್ನ ಪತಿ ವಿರುದ್ಧ ಇಲ್ಲಸಲ್ಲದ ದೂರುಗಳನ್ನು ದಾಖಲಿಸುತ್ತಿದ್ದಾರೆ ಎಂದು ಯೋಗಿತಾ ತನ್ನ ಅಳಲು ತೋಡಿಕೊಂಡಿದ್ದಾಳೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply