ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಹೋಗುವಂತೆ ನಾನು ಕರೆ ಕೊಡುತ್ತೇನೆ: ಯತ್ನಾಳ್‌

ಬೆಂಗಳೂರು: ಹಿಜಬ್‌ (Hijab) ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಕಿಡಿಕಾರಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಯತ್ನಾಳ್‌, ಸಿದ್ದರಾಮಯ್ಯನವರು ಹಿಜಬ್ ಧರಿಸಬಹುದು ಎಂದು ಹೇಳುತ್ತಾ ಯಾರು ಯಾವ ಬಟ್ಟೆಯಾದರೂ ಧರಿಸಲು ಅವಕಾಶವಿದೆ ಎಂದು ಹೇಳಿದ್ದಾರೆ. ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗಳಲ್ಲಿ ಭಾಗವಹಿಸಲು ನಾನು ಕರೆ ಕೊಡುತ್ತಿದ್ದೇನೆ. ಅವರಿಗಿಲ್ಲದ ಸಮವಸ್ತ್ರ ನೀತಿ ಹಿಂದೂಗಳಿಗೂ ಇಲ್ಲ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಹಿಜಬ್ ನಿಷೇಧ ಆದೇಶ ವಾಪಸ್‌ಗೆ ಇನ್ನೂ ತೀರ್ಮಾನಿಸಿಲ್ಲ- ಇಂದು ಉಲ್ಟಾ ಹೊಡೆದ್ರಾ ಸಿಎಂ?

ಓಲೈಕೆ ರಾಜಕಾರಣಕ್ಕೇನಾದರೂ ಮತ್ತೊಂದು ಹೆಸರು ಇದ್ದರೇ ಅದು ಕಾಂಗ್ರೆಸ್ ಪಕ್ಷ. ರಾಜ್ಯಾದ್ಯಂತ ಹಿಂದೂ ವಿದ್ಯಾರ್ಥಿಗಳು ಯಾವ ಬಟ್ಟೆಯಾದರೂ ಧರಿಸಿ ಕೇಸರಿ ಶಾಲು ಸಮೇತ ತರಗತಿಗಳಲ್ಲಿ ಭಾಗವಹಿಸುತ್ತಾರೆ. ಅವರಿಗೆ ಯಾವ ಕಿರುಕುಳ ನೀಡಬಾರದು ಎಂದು ಆಗ್ರಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯನವರಿಗೆ ಮಾಹಿತಿಯ ಕೊರತೆ ಇದೆ. ರಾಜ್ಯದಲ್ಲಿ ಹಿಜಬ್ ನಿಷೇಧಿಸಿ ಯಾವ ಆದೇಶವೂ ಇಲ್ಲ. ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನೀತಿಯನ್ನು ಜಾರಿ ಮಾಡಿದ್ದು, ಸ್ಥಳೀಯ ಕಾಲೇಜುಗಳು ನಿರ್ಧಾರ ಮಾಡಬಹುದು ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಹೇಳಿದ್ದರೂ, ರಾಜಕಾರಣಕ್ಕಾಗಿ ಶಾಲಾ-ಕಾಲೇಜುಗಳ ಸಮವಸ್ತ್ರ ನೀತಿಯನ್ನೂ ಅಮಾನತು ಮಾಡುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಹಿಜಬ್‌ ನಮ್ಮ ಹಕ್ಕು, ಇನ್ಮುಂದೆ ಅಣ್ಣ-ತಮ್ಮಂದಿರಂತೆ ಬದುಕೋಣ – ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ಮುಸ್ಕಾನ್‌

ಹಿಜಬ್‌ ನಿಷೇಧ ಆದೇಶವನ್ನು ವಾಪಸ್‌ ಪಡೆಯಲಾಗುವುದು ಎಂದು ನಿನ್ನೆ (ಶುಕ್ರವಾರ) ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿದ್ದರು. ಈ ಹೇಳಿಕೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಯಿತು. ಭಾರಿ ಟೀಕೆ ಬಳಿಕ ತಮ್ಮ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಹಿಜಬ್‌ ಧರಿಸುವುದನ್ನು ನಿಷೇಧಿಸಿ ಹೊರಡಿಸಿರುವ ಆದೇಶವನ್ನು ಇನ್ನೂ ವಾಪಸ್‌ ಪಡೆದಿಲ್ಲ. ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.