ಗೃಹ ಖಾತೆ, ಲೋಕೋಪಯೋಗಿ ಖಾತೆಗಳ ಮೇಲೆ ಬಿ.ಸಿ ಪಾಟೀಲ್ ಕಣ್ಣು

ಬೆಂಗಳೂರು: ಮುಂದಿನ ವಾರ ಮುಖ್ಯಮಂತ್ರಿಗಳು ದೆಹಲಿಗೆ ಹೋಗುವ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ಖಾತೆ ಡಿಮ್ಯಾಂಡ್ ಇರಲಾರಂಭಿಸಿದ್ದಾರೆ. ಹಿರೇಕೆರೂರು ಶಾಸಕ ಬಿ.ಸಿ ಪಾಟೀಲ್ ಎಲ್ಲರಿಗಿಂತ ಮುಂಚೆಯೇ ಪ್ರಬಲ ಖಾತೆಗೆ ಸಿಎಂ ಬಳಿ ಬೇಡಿಕೆ ಇಟ್ಟಿದ್ದಾರೆ. ಇಂದು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿರುವ ಶಾಸಕ ಬಿ.ಸಿ ಪಾಟೀಲ್ ತಮಗೆ ಗೃಹ ಖಾತೆ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದ ಶಾಸಕ ಬಿ.ಸಿ ಪಾಟೀಲ್, ನಾನು ಪೊಲೀಸ್ ಇಲಾಖೆಗೆ ಬರಲಿ ಅಂತ ಪೊಲೀಸರ ನಿರೀಕ್ಷೆ ಇದೆ. ಬಹುಶಃ ಇಲ್ಲಿವರೆಗೆ ಪೊಲೀಸ್ ಇಲಾಖೆಯವರು ಇಂಥವರೇ ಗೃಹ ಸಚಿವರಾಗಬೇಕು ಎಂದು ಕೇಳಿಲ್ಲ. ನಾನು ಶಾಸಕನಾಗುವ ಮೊದಲು ಪೊಲೀಸ್ ಆಗಿದ್ದೆ. ಹೀಗಾಗಿ ಕೆಲ ಪೊಲೀಸರಿಗೆ ನಾನು ಗೃಹ ಸಚಿವನಾಗಬೇಕೆಂಬ ಬಯಕೆ ಇದೆ. ನಾನು ಈ ಮುಂಚೆ ಪೊಲೀಸ್ ಅಧಿಕಾರಿಯಾಗಿದ್ದರಿಂದ ಅವರು ಈಗ ನಾನೇ ಸಚಿವನಾಗಲಿ ಕೇಳುತ್ತಿದ್ದಾರಂತೆ. ಆದರೆ ನಾನು ಇದೇ ಖಾತೆ ಬೇಕು ಅಂತ ಕೇಳಿಲ್ಲ. ಯಾವ ಖಾತೆ ಕೊಟ್ಟರೂ ಸ್ವೀಕರಿಸುತ್ತೇನೆ. ಪಕ್ಷ ಮತ್ತು ಮುಖ್ಯಮಂತ್ರಿಗಳ ನಿರ್ಧಾರವೇ ಅಂತಿಮ ಎಂದು ತಿಳಿಸಿದರು.

ಮುಂದುವರಿದು ಮಾತನಾಡಿದ ಬಿ.ಸಿ ಪಾಟೀಲ್, ಇನ್ನೂ ಕೆಲವರು ಲೋಕೋಪಯೋಗಿ ಖಾತೆ ತಗೊಳ್ಳಿ ಅಂದಿದ್ದಾರೆ. ಸಿಎಂ ಅಂತಿಮವಾಗಿ ನನಗೆ ಯಾವ ಖಾತೆ ಕೊಡುತ್ತಾರೆ ಅಂತ ನೋಡೋಣ. ಅವರು ಯಾವುದೇ ಖಾತೆ ಕೊಟ್ಟರೂ ನಾನು ನಿಭಾಯಿಸೋಕೆ ಸಿದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಸಂಕ್ರಾಂತಿ ನಂತರ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ನಾವೆಲ್ಲ ಸಚಿವರಾಗಿಯೇ ಅಧಿವೇಶನಕ್ಕೆ ಹಾಜರಾಗಲಿದ್ದೇವೆ. ಅಧಿವೇಶನ ಇರೋದು ಫೆಬ್ರವರಿ 17ಕ್ಕೆ. ಅಷ್ಟರೊಳಗೆ ಸಂಪುಟ ವಿಸ್ತರಣೆ ಆಗುವ ಭರವಸೆ ಇದೆ ಎಂದು ಇದೇ ವೇಳೆ ಶಾಸಕ ಬಿ.ಸಿ ಪಾಟೀಲ್ ತಿಳಿಸಿದರು.

Comments

Leave a Reply

Your email address will not be published. Required fields are marked *