ಕೆಲಸ ಕೊಡ್ತೀವೆಂದು ಭೂಮಿ ಪಡೆದ್ರು- ಬಳ್ಳಾರಿಯಲ್ಲಿ ಮಿತ್ತಲ್ ಕಂಪೆನಿಯಿಂದ ರೈತರಿಗೆ ಮೋಸ

ಬಳ್ಳಾರಿ: ಅದು ಚಿನ್ನದಂಥ ಭೂಮಿ. ಬಂಗಾರದಂತಹ ಬೆಳೆ ಬೆಳೆಯೋ ಆ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡು ದಶಕವೇ ಕಳೆದಿದೆ. ಆದ್ರೆ ಸ್ಟೀಲ್ ಕಾರ್ಖಾನೆ ಸ್ಥಾಪನೆ ಮಾಡೋದಾಗಿ ಭೂಮಿ ಪಡೆದ ಮಿತ್ತಲ್ ಕಂಪನಿ ಮತ್ತು ಬ್ರಾಹ್ಮಣಿ ಸ್ಟೀಲ್ ಕಂಪನಿ ಇದೀಗ ಸೋಲಾರ್ ಪ್ಲಾಂಟ್ ಸ್ಥಾಪನೆ ಮಾಡಲು ಹೊರಟಿದೆ. ಹೀಗಾಗಿ ರೈತರಿಗೆ ಉದ್ಯೋಗ ಆಸೆ ತೋರಿಸಿ ಭೂಮಿ ವಶಪಡಿಸಿಕೊಂಡ ಮಿತ್ತಲ್ ಕಂಪನಿ ವಿರುದ್ಧ ರೈತರು ಹೋರಾಟಕ್ಕೆ ಇಳಿದಿದ್ದಾರೆ.

ಬಳ್ಳಾರಿ ಜಿಲ್ಲೆಯ ಕುಡತಿನಿ, ಹರಗಿನಿಡೋಣಿ, ವೇಣಿವೀರಾಪುರ, ಕೊಳಗಲ್ ಸೇರಿದಂತೆ ಹತ್ತಾರು ಗ್ರಾಮಗಳ ರೈತರು ಮತ್ತೆ ಹೋರಾಟಕ್ಕೆ ಇಳಿದಿದ್ದಾರೆ. ಯಾಕಂದ್ರೆ ಈ ಹಿಂದೆ ಈ ಗ್ರಾಮಗಳ ಸುತ್ತಮುತ್ತಲಿನ ನಾಲ್ಕುವರೆ ಸಾವಿರ ರೈತರಿಂದ 10,500 ಎಕರೆ ಭೂಮಿಯನ್ನು ಕೆಐಎಡಿಬಿ ವಶಪಡಿಸಿಕೊಂಡು ಮಿತ್ತಲ್ ಹಾಗೂ ಬ್ರಾಹ್ಮಣಿ ಕಂಪೆನಿಗಳಿಗೆ ನೀಡಿತ್ತು. ಆ ಕಂಪೆನಿಗಳು ಸ್ಟೀಲ್ ಕಾರ್ಖಾನೆ ಸ್ಥಾಪನೆ ಮಾಡಿ ಭೂಮಿ ನೀಡಿದ ರೈತರಿಗೆ ಉದ್ಯೋಗ ಕೊಡ್ತೀವಿ ಅಂತಾ ಭರವಸೆ ನೀಡಿದ್ವು. ಆದ್ರೆ ಇದೀಗ ಸ್ಟೀಲ್ ಕಾರ್ಖಾನೆ ಬದಲಾಗಿ ಸೋಲಾರ್ ಕಾರ್ಖಾನೆ ಸ್ಥಾಪನೆ ಮಾಡಲು ಹೊರಟಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಭೂಮಿ ಕೊಟ್ಟ 4,500 ರೈತರಿಗೆ ಪರಿಹಾರವನ್ನೂ ಕೊಟ್ಟಿಲ್ಲ. ರೈತರು ಇಂದಿಗೂ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದಾರೆ. ಇಂದು ಬೃಹತ್ ಹೋರಾಟಕ್ಕೆ ರೈತರು ಕೂಡಾ ಸಜ್ಜಾಗಿದ್ದು, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದಾರೆ.

Comments

Leave a Reply

Your email address will not be published. Required fields are marked *