ನಿಮ್ಮ ಮನೆ ಈಗ ‘ಕಾಂಡೋಮ್’ ಇದ್ದಂತೆ ‘ಎಸ್‍ಟಿಡಿ’ಯಿಂದ ರಕ್ಷಿಸಿಕೊಳ್ಳಿ – ಕಿವೀಸ್ ಕ್ರಿಕೆಟರ್

ವೆಲ್ಲಿಂಗ್ಟನ್: ಮಹಾಮಾರಿ ಕೊರೊನಾ ವೈರಸ್‍ನಿಂದಾಗಿ ಇಡೀ ಜಗತ್ತೇ ಭಯದ ವಾತಾವರಣದಲ್ಲಿದೆ. ಅಷ್ಟೇ ಅಲ್ಲದೆ ಒಂದರ ನಂತರ ಒಂದರಂತೆ ಅನೇಕ ಕ್ರೀಡಾಕೂಟಗಳನ್ನು ರದ್ದುಗೊಳಿಸಲಾಗುತ್ತಿದೆ. ಕೆಲವು ಕಂಪನಿಗಳಲ್ಲಿ ರಜೆ ನೀಡಿ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕೊಡಲಾಗಿದೆ. ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಕೆಲಸವನ್ನು ನ್ಯೂಜಿಲೆಂಡ್ ಕ್ರಿಕೆಟರ್ ಮಿಚೆಲ್ ಮೆಕ್‍ಕ್ಲೆನಾಘನ್ ಮಾಡಿದ್ದಾರೆ.

ಟ್ವೀಟ್ ಮಾಡಿರುವ ಮಿಚೆಲ್ ಮೆಕ್‍ಕ್ಲೆನಾಘನ್, ‘ನಿಮ್ಮ ಮನೆಯನ್ನು ಕಾಂಡೋಮ್ ಎಂದು ಭಾವಿಸಿ. ಜೊತೆಗೆ ಕೋವಿಡ್ 19ಅನ್ನು ಗುಣಪಡಿಸಲಾಗದ ಮಾರಕ ರೋಗ ಎಸ್‍ಟಿಡಿ (ಲೈಂಗಿಕವಾಗಿ ಹರಡುವ ರೋಗ- sexually transmitted disease) ಎಂದು ತಿಳಿಯಿರಿ. ಹೀಗಾಗಿ ಕೊರೊನಾ ವೈರಸ್‍ನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕೊರೊನಾ ಎಫೆಕ್ಟ್- ಸ್ಯಾನಿಟೈಜರ್‌ಗಿಂತಲೂ ಕಾಂಡೋಮ್‍ಗಳಿಗೆ ಭಾರೀ ಬೇಡಿಕೆ

ಮಿಚೆಲ್ ಮೆಕ್‍ಕ್ಲೆನಾಘನ್ ಅವರ ಟ್ವೀಟ್‍ಗೆ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕಿವೀಸ್ ಆಲ್‍ರೌಂಡರ್ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್)ನಲ್ಲಿನ ಕರಾಚಿ ಕಿಂಗ್ಸ್ ಪರ ಆಡಿದ್ದರು. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಏಕಾಏಕಿ ಟೂರ್ನಿಯನ್ನು ಮುಂದೂಡಲಾಗಿದೆ. ಹೀಗಾಗಿ ಇಂಗ್ಲೆಂಡ್, ನ್ಯೂಜಿಲೆಂಡ್‍ನ ಆಟಗಾರರು ಸ್ವದೇಶಕ್ಕೆ ಮರಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 13ನೇ ಆವೃತ್ತಿಯಲ್ಲಿ ಮೆಕ್‍ಕ್ಲೆನಾಘನ್ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದಾರೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ರವರೆಗೆ ಮುಂದೂಡಲಾಗಿದೆ. ಹೀಗಾಗಿ ಮೆಕ್‍ಕ್ಲೆನಾಘನ್ ಹೆಚ್ಚಿನ ಸಮಯವನ್ನು ನ್ಯೂಜಿಲೆಂಡ್‍ನಲ್ಲಿ ಕಳೆಯಬೇಕಾಗಬಹುದು.

ನ್ಯೂಜಿಲೆಂಡ್‍ನಲ್ಲಿ ಶುಕ್ರವಾರ ಸಂಜೆ 5 ಗಂಟೆ ಮಾಹಿತಿ ಪ್ರಕಾರ 39 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 200ರ ಗಡಿ ದಾಟಿದೆ.

Comments

Leave a Reply

Your email address will not be published. Required fields are marked *