ಜನರ ತೆರಿಗೆ ಹಣ ದುರುಪಯೋಗ: ಸಿಎಂ ವಿರುದ್ಧ RTI  ಕಾರ್ಯಕರ್ತನಿಂದ ರಾಜ್ಯಪಾಲರಿಗೆ ದೂರು

ಮಂಗಳೂರು: ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.

ಶಶಿಧರ್ ಶೆಟ್ಟಿ ಎಂಬುವವರು ಮಾಹಿತಿ ಹಕ್ಕಿನ ಅಡಿಯಲ್ಲಿ ಸಿದ್ದರಾಮಯ್ಯ ಅವರ ತೆರಿಗೆ ಹಣ ದುರುಪಯೋಗ ಮಾಡಿರುವ ಬಗ್ಗೆ ದಾಖಲೆಗಳನ್ನು ಕಲೆ ಹಾಕಿದ್ದಾರೆ. ಅಲ್ಲದೇ ಸಿಎಂ ಸಿದ್ದರಾಮಯ್ಯ ಸೇರಿದಂತೆ ಮೂವರು ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಕಳೆದ ಅಕ್ಟೋಬರ್ 22ರಂದು ಸಿಎಂ ಬಂಟ್ವಾಳದಲ್ಲಿ ಮಿನಿ ವಿಧಾನಸೌಧ ಉದ್ಘಾಟನೆ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡಿದ್ದರು. ಆದರೆ ಕಾರ್ಯಕ್ರಮದ ಭಾಷಣದಲ್ಲಿ ಇತರ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಮಾಡಿದ್ದು ಸರಿಯಲ್ಲ. ಹೀಗಾಗಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಕಾರ್ಯಕ್ರಮದ ವೇದಿಕೆ, ಊಟೋಪಚಾರ, ಸಾರಿಗೆ, ಮೈಕ್, ಶಾಮಿಯಾನ ಮತ್ತು ಇತರ ಖರ್ಚುಗಳಿಗೆ ಸರ್ಕಾರಿ ತೆರಿಗೆ ಹಣವನ್ನು ಬಳಸಲಾಗಿದೆ. ಆದರೆ ಸಿಎಂ ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಂತೆ ನಡೆದಿದ್ದು ಸಿಎಂ ರಾಜಕೀಯ ಭಾಷಣ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಒಟ್ಟು 2,65,752 ರೂ. ಖರ್ಚು ಮಾಡುವ ಮೂಲಕ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿವಿಧ ಕಾರ್ಯಕ್ರಮಗಳ ಉದ್ಘಾಟನೆಯ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಧನ ಸಚಿವ ಡಿಕೆ ಶಿವಕುಮಾರ್, ಅರಣ್ಯ ಸಚಿವ ರಮಾನಾಥ ರೈ, ಯುಟಿ ಖಾದರ್ ಅವರು ವೇದಿಕೆಯಲ್ಲಿ ಕಾಂಗ್ರೆಸ್ ಪರವಾಗಿ ಭಾಷಣವನ್ನು ಮಾಡಿದ್ದಾರೆ ಎಂದು ನಾಲ್ವರ ವಿರುದ್ಧವೂ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಅಲ್ಲದೇ ಈ ದೂರಿನ ಅನ್ವಯ ಎಫ್‍ಐಆರ್ ದಾಖಲಿಸಲು ಅನುಮತಿ ಕೊಡುವಂತೆ ಮನವಿ ಸಲ್ಲಿಸಿದ್ದಾರೆ.

Comments

Leave a Reply

Your email address will not be published. Required fields are marked *