ನವದೆಹಲಿ: ನಾಪತ್ತೆಯಾಗಿರುವ ವಾಯುಸೇನೆ ವಿಮಾನದಲ್ಲಿದ್ದ ಫ್ಲೈಟ್ ಲೆಫ್ಟಿನೆಂಟ್ ಶೀಘ್ರವೇ ಮನೆಗೆ ಮರಳುತ್ತಾನೆ ಎನ್ನುವ ನಿರೀಕ್ಷೆಯಲ್ಲಿ ಕುಟುಂಬದ ಸದಸ್ಯರು ಈಗ ದಿನದೂಡುತ್ತಿದ್ದಾರೆ.
13 ಜನರನ್ನು ಹೊತ್ತ ಭಾರತೀಯ ವಾಯುಪಡೆಯ ಎಎನ್-32 ವಿಮಾನ ಸೋಮವಾರ ಮಧ್ಯಾಹ್ನ ಕಾಣೆಯಾಗಿತ್ತು. ಈ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಪಂಜಾಬ್‍ನ ಪಟಿಯಾಲ ಜಿಲ್ಲೆಯ ಮೋಹಿತ್ ಗಾರ್ಗ್ ಅವರು ಭಾರತೀಯ ವಾಯುಪಡೆಯಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮೋಹಿತ್ ಅವರ ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಕಾರಣ ಮಗ ಕಾಣೆಯಾಗಿರುವ ವಿಚಾರವನ್ನು ಕುಟುಂಬದ ಸದಸ್ಯರು ತಾಯಿಗೆ ಇಲ್ಲಿಯವರೆಗೆ ತಿಳಿಸಿಲ್ಲ. ಮೋಹಿತ್ ಅವರು ಐದು ವರ್ಷದಿಂದ ಅಸ್ಸಾಂ ರಾಜ್ಯದ ಜೋರ್ಹತ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಕಳೆದ ವರ್ಷ ಅಸ್ತ ಗಾರ್ಗ್ ಅವರನ್ನು ಮೋಹಿತ್ ಮದುವೆಯಾಗಿದ್ದರು. ಕೊನೆಯದಾಗಿ ದೀಪಾವಳಿ ಹಬ್ಬದ ಸಮಯದಲ್ಲಿ ಮನೆಗೆ ಬಂದಿದ್ದ ಮೋಹಿತ್ ನಂತರ ಬಂದಿರಲಿಲ್ಲ.
ಈಗ ಮಗನನ್ನು ಹುಡುಕಲು ತಂದೆ ಸುರೇಂದ್ರಪಾಲ್ ಗಾರ್ಗ್ ಜೋರ್ಹತ್‍ಗೆ ಹೋಗಿದ್ದಾರೆ. ನನಗೆ ನನ್ನ ಮಗ ವಾಪಸ್ ಬೇಕು. ಮೋಹಿತ್ ಸಿಗುವ ತನಕ ಹುಡುಕುತ್ತೇನೆ. ನಾನು ಇದನ್ನು ಬಿಟ್ಟರೆ ಈಗ ಬೇರೆ ಏನೂ ಹೇಳುವುದಿಲ್ಲ. ನನ್ನ ಮಗನ ಬಗ್ಗೆ ಯಾವ ಮಾಹಿತಿಯೂ ಸಿಕ್ಕಿಲ್ಲ. ನನಗೆ ನನ್ನ ಮಗ ವಾಪಸ್ ಬೇಕು ಎಂದು ಹೇಳಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಮೋಹಿತ್ ಅವರ ಹಿರಿಯ ಸಹೋದರ ಆಶ್ವಿನ್, ಈ ರೀತಿಯ ಘಟನೆ ಮುಂದೆ ನಡೆಯಬಾರದು. ನಮ್ಮ ಸೇನೆಗೆ ನೀಡುವ ಉಪಕರಣಗಳು ಆಧುನಿಕವಾಗಿರಬೇಕು ಮತ್ತು ಸಮಯಕ್ಕೆ ತಕ್ಕಂತೆ ನವೀಕರಣವಾಗಿರಬೇಕು. ಈ ದೇಶವನ್ನು ರಕ್ಷಿಸುವ ಸೈನಿಕರನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.
ಮೂರು ದಿನ ಕಳೆದರೂ ಯಾವುದೇ ಮಾಹಿತಿ ಸಿಗದ ಕಾರಣ ಅವರ ಚಿಕ್ಕಪ್ಪ ರಿಷಿಪಾಲ್ ಗಾರ್ಗ್ ಅವರು ಮೋಹಿತ್ ಪತ್ನಿ ಅಸ್ತ ಗಾರ್ಗ್ ಅವರನ್ನು ಕರೆದುಕೊಂಡು ಜೋರ್ಹತ್ ಹೋಗಿದ್ದಾರೆ. ಏನಾದರೂ ಪವಾಡ ನಡೆದು ತಮ್ಮ ಮಗ ಮನೆಗೆ ವಾಪಸ್ ಬರಲಿ ಎಂದು ಕುಟುಂಬದ ಸದಸ್ಯರು ಈಗ ದೇವರನ್ನು ಬೇಡಿಕೊಳ್ಳುತ್ತಿದ್ದಾರೆ.

ಭಾರತೀಯ ವಾಯು ಪಡೆಯ ಸರಕು ಸಾಗಾಟ ವಿಮಾನದಲ್ಲಿ 8 ಮಂದಿ ಸಿಬ್ಬಂದಿ ಮತ್ತು 5 ಮಂದಿ ಪ್ರಯಾಣಿಕರಿದ್ದರು. ಅರುಣಾಚಲ ಪ್ರದೇಶದ ಮೆಚುಕಾ ವಾಯುನೆಲೆಯಿಂದ ಸೋಮವಾರ ಮಧ್ಯಾಹ್ನ 12.25ಕ್ಕೆ ಟೇಕಾಫ್ ಆಗಿದ್ದ ವಿಮಾನ 35 ನಿಮಿಷಗಳ ಕಾಲ ಸಂಪರ್ಕದಲ್ಲಿತ್ತು. ಆದರೆ ಮಧ್ಯಾಹ್ನ 1 ಗಂಟೆಯ ವೇಳೆ ಸಂಪರ್ಕ ಕಳೆದುಕೊಂಡಿದೆ. ಮೂರು ದಿನಗಳಿಂದಲೂ ವಿಮಾನಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.

Leave a Reply