ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿಯ ತಲೆಬುರುಡೆ, ಮೂಳೆಗಳು ಪತ್ತೆ!

ಚಿಕ್ಕಬಳ್ಳಾಪುರ: ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿಯೊಬ್ಬಳ ತಲೆ ಬುರುಡೆ ಸೇರಿದಂತೆ ಆಕೆಯ ಕೈ ಕಾಲಿನ ಮೂಳೆಗಳು ಜಿಲ್ಲೆಯ ಗೌರಿಬಿದನೂರು ತಾಲ್ಲೂಕು ಹನುಮನೇಹಳ್ಳಿ ಅರಣ್ಯಪ್ರದೇಶದಲ್ಲಿ ದೊರೆತಿವೆ.

ಮೂಲತಃ ಕೋಡಿಗಾನಹಳ್ಳಿ ಗ್ರಾಮದ ನಿವಾಸಿ 22 ವರ್ಷದ ಅನಿತಾ ಮಾರ್ಚ್ 4 ರಂದು ಕಾಣೆಯಾಗಿದ್ದರು. ಅನಿತಾ ಜಿಲ್ಲೆಯ ಗೌರಿಬಿದನೂರು ರೇಮಾಂಡ್ಸ್ ಗಾರ್ಮೆಂಟ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮಾರ್ಚ್ 4 ರಂದು ಕೆಲಸಕ್ಕೆ ತೆರಳಿದ್ದ ಅನಿತಾ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಸಂಬಂಧ ಮಂಚನೇಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಪ್ರಕರಣ ದೂರು ಪಡೆದು ತನಿಖೆ ಆರಂಭಿಸಿದ ಪೊಲೀಸರು ಇಂದು ಯುವತಿಯ ಬ್ಯಾಗ್, ಚಪ್ಪಲಿ, ತಲೆಬುರುಡೆ, ಸೇರಿದಂತೆ ಮೂಳೆಗಳು ಒಂದೆಡೆ ಪತ್ತೆ ಮಾಡಿದ್ದಾರೆ. ಸ್ಥಳದಲ್ಲಿ ದೊರೆತಿರುವ ವಸ್ತುಗಳನ್ನು ಆಧಾರಿಸಿ ಯುವತಿ ಸಾವನ್ನಪ್ಪಿರುವುದು ಸ್ಪಷ್ಟವಾಗುತ್ತಿದೆ. ಮತ್ತೊಂದೆಡೆ ಯುವತಿಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿರುವ ಎಸ್ಪಿ ಕಾರ್ತಿಕ್ ರೆಡ್ಡಿ ಘಟನಾ ಸ್ಥಳದಲ್ಲಿ ಮೃತದೇಹವೊಂದು ಸಂಪೂರ್ಣ ಕೊಳೆತು ಹೋಗಿದೆ. ಮೃತರ ತಲೆಬುರುಡೆ, ಮೂಳೆಗಳು ಮಾತ್ರ ಪತ್ತೆಯಾಗಿವೆ. ಯುವತಿಯ ಐಡಿ ಕಾರ್ಡ್ ಬ್ಯಾಗ್ ಘಟನಾ ಸ್ಥಳದಲ್ಲೇ ಸಿಕ್ಕಿದ್ದು, ಯುವತಿ ಮೃತದೇಹ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೆ ಅವಶೇಷಗಳು ಅದೇ ಯುವತಿಯಾದ್ದ ಅಥವಾ ಬೇರೆಯವರ ಮೃತದೇಹ ಎಂದು ತನಿಖೆಯ ನಂತರವ ತಿಳಿದು ಬರಲಿದೆ ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಕುರಿತು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *