2019ರ ಮಿಸ್ ಇಂಡಿಯಾ ಕಿರೀಟ ಗೆದ್ದ ರಾಜಸ್ಥಾನದ ಯುವತಿ

ಮುಂಬೈ: ಫೆಮಿನಾ ಮಿಸ್ ಇಂಡಿಯಾ 2019 ಪ್ರಕಟವಾಗಿದ್ದು, ರಾಜಸ್ಥಾನ ಮೂಲದ ಸುಮನ್ ರಾವ್ ಮಿಸ್ ಇಂಡಿಯಾ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಶನಿವಾರ ಮಿಸ್ ಇಂಡಿಯಾ ಗ್ರ್ಯಾಂಡ್ ಫಿನಾಲೆಯನ್ನು ಮುಂಬೈನ ಸರ್ದಾರ್ ವಲ್ಲಬಾ ಭಾಯ್ ಪಟೇಲ್ ಇಂಡೋರ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿತ್ತು. ಈ ಬಾರಿ ಸುಮನ್ ರಾವ್ ಮಿಸ್ ಇಂಡಿಯಾ ಕಿರೀಟವನ್ನು ಗೆದಿದ್ದಾರೆ. ಕಳೆದ ವರ್ಷ ವಿನ್ನರ್ ಆಗಿದ್ದ ಅನುಕೃತಿ ವಾಸ್, ಸುಮನ್ ಅವರಿಗೆ ಕಿರೀಟ ತೊಡಿಸಿದ್ದಾರೆ.

ಶನಿವಾರ 8 ಗಂಟೆಗೆ ಶುರುವಾದ ಈ ಕಾರ್ಯಕ್ರಮದಲ್ಲಿ ಹಲವು ಬಾಲಿವುಡ್ ಕಲಾವಿದರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಕರಣ್ ಜೋಹರ್, ಮನೀಶ್ ಪಾಲ್ ಹಾಗೂ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ನಿರೂಪಣೆ ಮಾಡಿದ್ದರು. ಅಲ್ಲದೆ ಹುಮಾ ಖುರೇಶಿ, ಚಿತ್ರಾಂಗದ ಸಿಂಗ್, ರೆಮೋ ಡಿಸೋಜಾ, ಆಯೂಷ್ ಶರ್ಮಾ, ಮುಕೇಶ್ ಛಾಬ್ರಾ, ದಿಯಾ ಮಿರ್ಜಾ ಹಾಗೂ ನೇಹಾ ದುಪಿಯಾ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಒಟ್ಟು 30 ಸುಂದರಿಯರು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನು ಛತ್ತಿಸ್‍ಗಡದ ಶಿವಾನಿ ಜಾಧವ್ ಪಡೆದಿದ್ದಾರೆ. ಶಿವಾನಿ ಈ ವರ್ಷ ಗ್ರ್ಯಾಂಡ್ ಇಂಟರ್ ನ್ಯಾಶನಲ್‍ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮೂರನೇ ಸ್ಥಾನವನ್ನು ಬಿಹಾರ್ ಮೂಲದ ಶ್ರೇಯಾ ರಂಜನ್ ಪಡೆದಿದ್ದಾರೆ. ಶ್ರೇಯಾ ಈ ವರ್ಷ ಮಿಸ್ ಯನೈಟೆಡ್ ಕಾಂಟಿನೆಂಟ್ ಬ್ಯೂಟಿ ಕಂಟೆಸ್ಟ್ ನಲ್ಲಿ ಭಾಗವಹಿಸಲಿದ್ದಾರೆ. ತೆಲಂಗಾಣ ಮೂಲದ ಸಂಜನಾ ವಿಜ್ ಈ ಬಾರಿ ರನ್ನರ್ ಅಪ್ ಆಗಿದ್ದಾರೆ.

ಮಿಸ್ ಇಂಡಿಯಾ 2019 ವಿಜೇತೆ ಸುಮನ್ ರಾವ್ ಡಿಸೆಂಬರ್ 7ರಂದು ಥೈಲ್ಯಾಂಡ್‍ನಲ್ಲಿ ಆಯೋಜಿಸಲಾಗಿರುವ ಮಿಸ್ ವರ್ಲ್ಡ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮಿಸ್ ಇಂಡಿಯಾ ಫಿನಾಲೆಯಲ್ಲಿ ಟಾಪ್ ಫೈನಲಿಸ್ಟ್ ನಲ್ಲಿ ಯುಪಿಯ ಶಿನಂತಾ ಚೌಹಾನ್, ಛತ್ತಿಸ್‍ಗಡದ ಶಿವಾನಿ ಜಾದವ್, ಅಸ್ಸಾಂನ ಜ್ಯೋತಿಸ್ಮಿತಾ ಬರೂವಾ, ಬಿಹಾರದ ಶ್ರೇಯಾ ಶಂಕರ್, ತೆಲಂಗಾಣದ ಸಂಜನಾ ವಿಜ್ ಹಾಗೂ ರಾಜಸ್ಥಾನದ ಸುಮನ್ ರಾವ್ ಇದ್ದರು.

Comments

Leave a Reply

Your email address will not be published. Required fields are marked *