ಸಾಲ ಮಾಡಿ ಬಿತ್ತನೆ ಮಾಡಿದ ಫಸಲಿಗೆ ಕಳೆ ನಾಶಕ ಸಿಂಪಡಿಸಿದ ದುಷ್ಕರ್ಮಿಗಳು

ದಾವಣಗೆರೆ: ಅಲ್ಪಸ್ವಲ್ಪ ಮಳೆಗೆ ಕಷ್ಟಪಟ್ಟು ಸಾಲ ಮಾಡಿ ಬಿತ್ತನೆ ಮಾಡಿ ಬೆಳೆದ ಮೆಕ್ಕೆಜೋಳದ ಫಸಲಿಗೆ ದುಷ್ಕರ್ಮಿ ಕಳೆ ನಾಶಕ ಸಿಂಪಡಿಸಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಟಿ. ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಟಿ. ಗೊಲ್ಲರಹಟ್ಟಿ ಗ್ರಾಮದ ರೈತ ಯರ್ರಪ್ಪ ಅವರಿಗೆ ಸೇರಿದ ನಾಲ್ಕು ಏಕರೆಯಲ್ಲಿ ಮೆಕ್ಕೆಜೋಳದ ಬೆಳೆ ಬೆಳೆದಿದ್ದು, ಬೆಳೆ ನೋಡಿ ಸಹಿಸಲಾಗದ ದುಷ್ಕರ್ಮಿಗಳು ರಾತ್ರೋರಾತ್ರಿ ಕಳೆ ನಾಶಕ ಔಷಧಿ ಸಿಂಪಡಿಸಿದ್ದಾರೆ. ಔಷಧಿ ಸಿಂಪಡಿಸಿದ ನಂತರ ನಾಲ್ಕು ಎಕರೆಯಲ್ಲಿ ಇರುವ ಮೆಕ್ಕೆಜೋಳದ ಬೆಳೆ ಸಂಪೂರ್ಣ ಒಣಗಿ ಹೋಗುತ್ತಿದೆ.

ಕಷ್ಟ ಪಟ್ಟು ಬೆಳೆದ ಬೆಳೆ ನಾಶವಾಗುತ್ತಿದೆ ಎಂದು ಬಡ ರೈತನ ಆಕ್ರಂದನ ಮುಗಿಲು ಮುಟ್ಟಿದೆ. ಹುಲ್ಲು ಜಾತಿಗೆ ಸೇರಿದ ಮೆಕ್ಕೆಜೋಳದ ಬೆಳೆಯಾಗಿದ್ದು, ಕಳೆ ನಾಶಕ ಸಿಂಪಡಿಸಿದರೆ ಸಂಪೂರ್ಣ ಒಣಗಿ ಹೋಗುತ್ತಿದೆ. ಇನ್ನೇನು ಎರಡು ತಿಂಗಳಲ್ಲಿ ಫಸಲು ಕೈಗೆ ಬರುತಿತ್ತು. ಆದರೆ ದುಷ್ಕರ್ಮಿಗಳು ಮಾಡಿದ ಕಿಡಿಗೇಡಿತನಕ್ಕೆ ಬೆಳೆ ಸಂಪೂರ್ಣ ನಾಶವಾಗಿದೆ.

ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಿಡಿಗೇಡಿತನ ಮಾಡಿದ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ರೈತ ಯರ್ರಪ್ಪ ಅವರು ಸಾಲಸೋಲಾ ಮಾಡಿ ಬಿತ್ತನೆ ಮಾಡಿದ ಮೆಕ್ಕೆಜೋಳ ನಾಶವಾಗಿದ್ದಕ್ಕೆ ಆಕಾಶವೇ ಕಳಚಿ ಬಿದ್ದಂತಾಗಿದೆ.

Comments

Leave a Reply

Your email address will not be published. Required fields are marked *