ಹಾಡಹಗಲೇ ಕಾರ್ ಗಳಿಗೆ ಬೆಂಕಿ- ಕಲಬುರಗಿಯಲ್ಲಿ ಮುಂದುವರೆದ ದುಷ್ಕೃತ್ಯ

ಕಲಬುರಗಿ: ಮಾನಸಿಕ ಅಸ್ವಸ್ಥನಿಂದ ನಗರದಲ್ಲಿ ಕಾರ್ ಗಳಿಗೆ ಬೆಂಕಿ ಹಚ್ಚುವ ಘಟನೆ ಮುಂದುವರೆದಿದ್ದು, ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಗರದ ಖೂಬಾ ಪ್ಲಾಟ್ ನಲ್ಲಿ ಹುಂಡೈ ಕಂಪನಿ ಕಾರ್ ಗೆ ಬೆಂಕಿ ಹಚ್ಚಲಾಗಿದೆ.

ಖೂಬಾ ಪ್ಲಾಟ್ ನಲ್ಲಿ ವಾಸಿಸುವ ಆಕಾಶ್ ಚಿಮ್ಮಲಗಿ ಎನ್ನುವವರಿಗೆ ಸೇರಿರುವ ಕಾರಿಗೆ ಬೆಂಕಿ ಹಚ್ಚಲಾಗಿದೆ. 15 ದಿನಗಳ ಹಿಂದೆಯಷ್ಟೇ ಆಕಾಶ್ ಅವರು ಕಾರನ್ನು ಖರೀದಿಸಿದ್ದರು. ಈ ವಿಕೃತ ಮನಸ್ಸಿನ ಆರೋಪಿಗಳು ಕಾರಿನ ಮುಂಭಾಗದಲ್ಲಿ ಕರ್ಪೂರ ಇಟ್ಟು ಕಾರಿಗೆ ಬೆಂಕಿ ಹಚ್ಚುತ್ತಿದ್ದು, ಕಳೆದ ಎರಡು ದಿನಗಳಲ್ಲಿಯೇ ಸುಮಾರು 8 ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ.

ಪದೇ ಪದೇ ಕಾರುಗಳಿಗೆ ಬೆಂಕಿ ಹಚ್ಚುವ ಪ್ರಕರಣಗಳಿಂದ ಕಂಗಲಾಗಿರುವ ಕಲಬುರಗಿ ನಗರದ ಕಾರು ಮಾಲೀಕರು, ಇದೀಗ ತಮ್ಮ ಕಾರುಗಳ ರಕ್ಷಣೆಗಾಗಿ ಮನೆ ಬಿಟ್ಟು ಕಾರಿನಲ್ಲಿ ಮಲಗುವ ಪರಿಸ್ಥಿತಿ ಎದುರಾಗಿದೆ.

ಆರೋಪಿ ಭಾನುವಾರವೂ ಸಹ ನಗರದ ವಿವಿಧೆಡೆ ಕಾರುಗಳಿಗೆ ಬೆಂಕಿ ಹಚ್ಚಿದ್ದಾನೆ. ನಗರದ ಸೇಡಂ ರಸ್ತೆಯ ಜಯನಗರದ ಬಳಿ 2, ಬನಶಂಕರಿ ಕಾಲೋನಿ ಬಳಿ 1, ವಿಶ್ವೇಶರಯ್ಯ ಕಾಲೋನಿ ಬಳಿ 1, ಯುನೈಟೆಡ್ ಆಸ್ಪತ್ರೆ ಬಳಿ 1, ಲಾಲಗೇರಿ ಕ್ರಾಸ್ ಬಳಿ 1 ಕಾರು ಸೇರಿದಂತೆ ಎಂಟಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದಾನೆ.

ಕಾರಿಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿ ಕಾರುಗಳಿಗೆ ಬೆಂಕಿ ಹಚ್ಚುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಪೊಲೀಸರು ಆರೋಪಿಯ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ.

Comments

Leave a Reply

Your email address will not be published. Required fields are marked *