ಅಂತರಾಜ್ಯಕ್ಕೆ ಅಪ್ರಾಪ್ತೆಯರನ್ನು ಮಾರಾಟ ಮಾಡ್ತಿದ್ದ ಮೂವರಿಗೆ ಜೀವಾವಧಿ ಶಿಕ್ಷೆ

ಬೆಳಗಾವಿ: ಹಣದಾಸೆಗೆ ಅಂತರಾಜ್ಯಕ್ಕೆ ಅಪ್ರಾಪ್ತ ಬಾಲಕಿಯರನ್ನು ಮಾರಾಟ ಮಾಡುವ ಉದ್ದೇಶದಲ್ಲಿ ಮನೆಯಲ್ಲಿ ಕೂಡಿಟ್ಟ ಪ್ರಕರಣವನ್ನು 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಿದ್ದು, ಇಂದು ಮೂವರು ಅಪರಾಧಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಜೊತೆಗೆ ದಂಡ ವಿಧಿಸಿ ತೀರ್ಪು ಹೊರಡಿಸಿದೆ.

ಕಿತ್ತೂರು ತಾಲೂಕಿನ ಹೊಳಿನಾಗಲಾಪುರ ಗ್ರಾಮದ ಮಂಜುಳಾ ಅಡಿವೆಪ್ಪ ಚೌಡಪ್ಪನವರ(60), ಬೈಲಹೊಂಗಲ ತಾಲೂಕಿನ ಅಮಟೂರ ಗ್ರಾಮದ ಈರನಗೌಡ ಅಣ್ಣಪ್ಪಗೌಡ ಪಾಟೀಲ್(37), ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಸಂದೀಪ ಪಾರಸ್ ಗಳಗ(32) ಶಿಕ್ಷೆಗೆ ಗುರಿಯಾದವರು.

2015 ಅಕ್ಟೋಬರ್ 5ರಂದು ಹೊಳಿನಾಗಲಾಪುರ ಗ್ರಾಮದಲ್ಲಿ ಮಂಜುಳಾ ಇಬ್ಬರು ಪುರುಷರೊಂದಿಗೆ ಸೇರಿ ಈ ಕೃತ್ಯವೆಸೆಗಿದ್ದಳು. ತನ್ನ ಮನೆಯಲ್ಲಿ ಇಬ್ಬರು ಅಪ್ರಾಪ್ತೆಯರನ್ನು ಬೇರೆ ಕಡೆಗಳಿಂದ ಕರೆತಂದು ವೇಶ್ಯಾವಾಟಿಕೆಗಾಗಿ ಮಾರಾಟ ಮಾಡುವ ಮೂಲಕ ಹಣಗಳಿಕೆಗೆ ಮುಂದಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೆರೆಗೆ ಕಿತ್ತೂರು ಠಾಣೆಯ ಪಿಎಸ್‍ಐ ನಿಂಗನಗೌಡ ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಅರುಣ ನೀರಗಟ್ಟಿ ಹಾಗೂ ಸ್ಪಂದನ ಸಂಸ್ಥೆ ಸುಶೀಲಾ ಅವರು ದಾಳಿ ನಡೆಸಿ ಮೂವರು ಅಪರಾಧಿಗಳನ್ನು ಬಂಧಿಸಿ, ಅಪ್ರಾಪ್ತೆಯರನ್ನು ರಕ್ಷಣೆ ಮಾಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‍ಐ ನಿಂಗನಗೌಡ ಪಾಟೀಲ್ ಸ್ವಂ ದೂರು ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದರು.

Comments

Leave a Reply

Your email address will not be published. Required fields are marked *