ಸ್ವೀಟ್ ಆಸೆ ತೋರಿಸಿ 9ರ ಬಾಲಕಿ ಮೇಲೆ ಅತ್ಯಾಚಾರ!

ಹೈದರಾಬಾದ್: ಸ್ವೀಟ್ ನೀಡುವುದಾಗಿ ಆಸೆ ತೋರಿಸಿ ಯುವಕನೋರ್ವ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದ ಅಮಾನವೀಯ ಘಟನೆ ಆಂಧ್ರ ಪ್ರದೇಶದ ಸಿಂಗರೆನಿ ಕಾಲೋನಿಯಲ್ಲಿ ನಡೆದಿದೆ.

ಸಿಂಗರೆನಿ ಕಾಲೋನಿಯ ನಿವಾಸಿ ಶ್ರೀನಿವಾಸ್(28) 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಮನೆಯ ಪಕ್ಕದ ಮನೆಯಲ್ಲಿಯೇ ಶ್ರೀನಿವಾಸ್ ವಾಸಿಸುತ್ತಿದ್ದನು. ಶುಕ್ರವಾರ ರಾತ್ರಿ ಸುಮಾರು 7.30ರ ಹೊತ್ತಿಗೆ ಬಾಲಕಿ ತನ್ನ ಸಹೋದರನ ಜೊತೆ ಮನೆಯ ಮುಂದೆ ಆಟವಾಡುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ ಶ್ರೀನಿವಾಸ್ ಬಾಲಕಿಗೆ ಸ್ವೀಟ್ ಕೊಡುತ್ತೇನೆ ಬಾ ಎಂದು ತನ್ನೊಡನೆ ಕರೆದೋಯ್ದು ಅತ್ಯಾಚಾರ ಮಾಡಿದ್ದಾನೆ.

ಈ ವಿಷಯವನ್ನು ಬಾಲಕಿ ಯಾರ ಬಳಿಯೂ ಹೇಳಿರಲಿಲ್ಲ. ಬಳಿಕ ಶನಿವಾರ ಬೆಳಗ್ಗೆ ಹೊಟ್ಟೆ ನೋವೆಂದು ಬಾಲಕಿ ನರಳಾಡುತ್ತಿದ್ದ ವೇಳೆ ಆಕೆಯ ತಾಯಿ ಪ್ರಶ್ನಿಸಿದಾಗ, ನಡೆದ ಘಟನೆಯನ್ನು ಬಾಲಕಿ ವಿವರಿಸಿದ್ದಾಳೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಬಾಲಕಿಯ ತಾಯಿ ನಗರದ ಸಾಯಿದಾಬಾದ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ನೀಡಿದ್ದಾರೆ.

ಸದ್ಯ ದೂರಿನ ಆಧಾರದ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376(2) ಹಾಗೂ ಪೋಸ್ಕೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *