ರಾಜ್ಯವನ್ನ ಮತ್ತೆ ಕಡೆಗಣಿಸಿದ ಕೇಂದ್ರ?- ಕೊರೊನಾದಿಂದ ತತ್ತರಿಸಿದ ಕರ್ನಾಟಕಕ್ಕೆ ಇಲ್ಲ ಅನುದಾನ

ನವದೆಹಲಿ: ನೆರೆ ಪರಿಹಾರ ವಿಚಾರದಲ್ಲಿ ರಾಜ್ಯವನ್ನು ಕಡೆಗಣಿಸಿದ್ದ ಕೇಂದ್ರ ಸರ್ಕಾರ ಈಗ ಮತ್ತೆ ಅದೇ ಧೋರಣೆ ಮುಂದುವರಿಸಿದೆ. ಕೊರೊನಾ ವೈರಸ್‍ನಿಂದ ತತ್ತರಿಸುತ್ತಿರುವ ಕರ್ನಾಟಕಕ್ಕೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದಂತೆ ಕಂಡು ಬಂದಿದೆ.

ಕೊರೊನಾ ವೈರಸ್ ಭೀತಿ ಹಿನ್ನೆಲೆ ರಾಜ್ಯಗಳಿಗೆ ನೆರವಾಗುವ ನಿಟ್ಟಿನಲ್ಲಿ ಇಂದು 17,287.08 ಕೋಟಿ ಹಣವನ್ನು ಕೇಂದ್ರ ಹಣಕಾಸು ಇಲಾಖೆ ಬಿಡುಗಡೆ ಮಾಡಿದೆ. ಎಸ್‍ಡಿಆರ್‍ಎಫ್ ಅನುದಾನದ ಅಡಿ 2020-21 ರ ಮೊದಲ ಕಂತಾಗಿ 11,092 ಕೋಟಿ ಹಾಗೂ 15 ನೇ ಹಣಕಾಸು ಆಯೋಗದ ಶಿಫಾರಸು ಹಿನ್ನಲೆ ಆದಾಯ ಕೊರತೆ ಅನುದಾನದ ಅಡಿಯಲ್ಲಿ 6,195 ಕೋಟಿ ಬಿಡುಗಡೆ ಮಾಡಿದೆ.

14 ರಾಜ್ಯಗಳಿಗೆ ಕೇಂದ್ರ ಸರ್ಕಾರ ಈ ಅನುದಾನ ಹಂಚಿಕೆ ಮಾಡಿದೆ. ಆಂಧ್ರಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಕೇರಳ, ಮಣಿಪುರ್, ಮೇಘಾಲಯ, ಮಿಜೋರಾಂ, ನಾಗಲ್ಯಾಂಡ್, ಪಂಜಾಬ್, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಾಖಂಡ, ಪಶ್ಚಿಮ ಬಂಗಾಳಕ್ಕೆ ಅನುದಾನ ನೀಡಿದೆ. ಈ ಪಟ್ಟಿಯಲ್ಲಿ ಎಲ್ಲೂ ಕರ್ನಾಟಕದ ಹೆಸರು ಉಲ್ಲೇಖಿಸಿಲ್ಲದ ಹಿನ್ನಲೆ ಮೊದಲ ಕಂತಿನ ಅನುದಾನ ಹಂಚಿಕೆಯಲ್ಲಿ ಕರ್ನಾಟಕನ್ನ ಕೇಂದ್ರ ಸರ್ಕಾರ ಕೈ ಬಿಟ್ಟಿತಾ ಎಂಬ ಪ್ರಶ್ನೆ ಎದ್ದಿದೆ.

ನೆರೆ ಪರಿಹಾರ:
ರಾಜ್ಯದಲ್ಲಿ ನೆರೆ ನಷ್ಟ ಅಂದಾಜು 1 ಲಕ್ಷ ಕೋಟಿ ರೂ. ಆಗಿತ್ತು. ಆದರೆ ಪ್ರಧಾನಿ ಮೋದಿ ಸರ್ಕಾರ ಈವರೆಗೂ ಎರಡು ಕಂತುಗಳಲ್ಲಿ 3,069 ಕೋಟಿ ರೂ. ಮಾತ್ರ ನೀಡಿದೆ. ಉಳಿದ ಪರಿಹಾರವನ್ನು ಯಾವಾಗ ನೀಡುತ್ತೆ ಅಂತಾ ಕಾಯ್ತಿದ್ದ ಕರ್ನಾಟಕಕ್ಕೆ ಕೇಂದ್ರದ ನಡೆ ದೊಡ್ಡ ಶಾಕ್ ನೀಡಿದೆ.

ಇದೇ ವಿಚಾರವಾಗಿ ಜನರಿಯಲ್ಲಿ ಟ್ವೀಟ್ ಮಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ನೆರೆ ಪರಿಹಾರಕ್ಕಾಗಿ 1869 ಕೋಟಿ ರೂ. ಪರಿಹಾರ ನೀಡಿರುವ ನರೇಂದ್ರ ಮೋದಿ ಸರ್ಕಾರಕ್ಕೆ ಧನ್ಯವಾದಗಳು. ಅಂದಾಜು ನೆರೆ ನಷ್ಟ 1 ಲಕ್ಷ ಕೋಟಿ ರೂ. ಸಿಎಂ ಯಡಿಯೂರಪ್ಪ ಸರ್ಕಾರ ಕೇಳಿದ್ದು 38 ಸಾವಿರ ಕೋಟಿ ರೂ. ಎರಡು ಕಂತುಗಳಲ್ಲಿ ಕೇಂದ್ರ ನೀಡಿರುವುದು ರೂ.3,069 ಕೋಟಿ. ಉಳಿದದ್ದು ಯಾವಾಗ ಎಂದು ಪ್ರಶ್ನಿಸಿದ್ದರು.

ಆಗಸ್ಟ್ ತಿಂಗಳ ನೆರೆಹಾವಳಿಯ ಸಮೀಕ್ಷಾ ವರದಿ ಆಧಾರದಲ್ಲಿ ಸಿಎಂ ಯಡಿಯೂರಪ್ಪನವರು ರೂ.38 ಸಾವಿರ ಕೋಟಿ ಪರಿಹಾರ ಕೇಳಿದ್ದರು. ಅಕ್ಟೋಬರ್ ತಿಂಗಳ ಅತಿವೃಷ್ಟಿಯ ಸಮೀಕ್ಷೆ ಇನ್ನೂ ನಡೆದಿಲ್ಲ. ಅದನ್ನು ತಕ್ಷಣ ಪೂರ್ಣಗೊಳಿಸಿ. ಆ ಸಮೀಕ್ಷಾ ವರದಿಯ ಜೊತೆ ಪರಿಹಾರಕ್ಕಾಗಿ ಪೂರಕ ಬೇಡಿಕೆ ಸಲ್ಲಿಸಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದರು.

Comments

Leave a Reply

Your email address will not be published. Required fields are marked *