ಗುತ್ತಿಗೆ ಸಿಕ್ಕಿದ್ದಕ್ಕೆ ಹಣ ಕೊಡಿ – ಸಚಿವರ ಬೆಂಬಲಿಗರಿಂದ ಪರ್ಸಂಟೇಜ್ ಗೂಂಡಾಗಿರಿ!

– ವೆಂಕಟರಾವ್ ಬೆಂಬಲಿಗರಿಂದ ಹಲ್ಲೆ
– ಶಾಮಿಯಾನ ಗುತ್ತಿಗೆದಾರನಿಂದ ದೂರು

ರಾಯಚೂರು: ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡರ ಬೆಂಬಲಿಗರು ಪರ್ಸಂಟೇಜ್ ಕಲೆಕ್ಷನ್‍ಗೆ ಮುಂದಾಗಿ, ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಚಿವರ ಮೇಲೆ ಗಂಭೀರ ಆರೋಪ ಕೇಳಿಬಂದಿದೆ.

ಜನವರಿ 5 ರಿಂದ 7 ರವರೆಗೆ ರಾಯಚೂರಿನ ಸಿಂಧನೂರಿನಲ್ಲಿ ರಾಜ್ಯಮಟ್ಟದ ಮತ್ಸ್ಯ ಹಾಗು ಪಶು ಮೇಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಮೇಳದಲ್ಲಿ ಶಾಮಿಯಾನ ಹಾಕಿದ್ದ ಗುತ್ತಿಗೆದಾರ ಮೆಹಬೂಬ್ ಮುಲ್ಲಾ ಅವರಿಗೆ ಪರ್ಸಂಟೇಜ್ ಕೊಡಬೇಕು ಅಂತ ಸಚಿವ ನಾಡಗೌಡರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ.

ವೆಂಕಟರಾವ್ ನಾಡಗೌಡರ ಬೆಂಬಲಿಗರಾದ ವೆಂಕಟೇಶ್, ಹನುಮನಗೌಡ, ಮಹಾಲಿಂಗಸ್ವಾಮಿ, ವಿಶ್ವ ಎಂಬುವವರು ಶಾಮಿಯಾನ ಮಾಲೀಕರ ಸಂಘದ ಅಧ್ಯಕ್ಷ ಮೆಹಬೂಬ್ ಮುಲ್ಲಾ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿ ಸಚಿವರ ಸ್ವಗ್ರಾಮ ಜವಳಗೇರಾಕ್ಕೆ ಕಾರಿನಲ್ಲಿ ಬಲವಂತವಾಗಿ ಕುಳ್ಳಿರಿಸಿ ಕರೆದುಕೊಂಡು ಹೋಗಿದ್ದಾರೆ. ಆಗ ಸಚಿವರು ಸಹ ಹಣ ನೀಡದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಅಂತ ಮೆಹಬೂಬ್ ಮುಲ್ಲಾ ಆರೋಪಿಸಿದ್ದಾರೆ.

ಮೇಳದ ಶಾಮಿಯಾನ ಗುತ್ತಿಗೆಯನ್ನು ಶರಣಬಸವೇಶ್ವರ ಶಾಮಿಯಾನ ಸಪ್ಲೇಯರ್ಸ್ ಪಡೆದಿದ್ದರು. ಅವರಿಂದ ಮೆಹಬೂಬ್ ಅವರು ಉಪಗುತ್ತಿಗೆ ಪಡೆದಿದ್ದರು. 16 ಲಕ್ಷ ರೂ. ಚೆಕ್ ಡ್ರಾ ಮಾಡಿಕೊಳ್ಳಲು ಆಕ್ಸಿಸ್ ಬ್ಯಾಂಕ್‍ಗೆ ಹೋದಾಗ ಈ ಘಟನೆ ನಡೆದಿದೆ. ಬ್ಯಾಂಕ್ ಮ್ಯಾನೆಜರ್ ಸಹ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಮೆಹಬೂಬ್ ಅವರು ಆರೋಪಿಸಿದ್ದಾರೆ. ಸಿಂಧನೂರು ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಮೆಹಬೂಬ್ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *