ಸುಳ್ಳು ಹೇಳಿದರೆ ಬರೆ ಎಳಿಬೇಕಾಗುತ್ತೆ – ತಪ್ಪು ವರದಿ ಕೊಟ್ಟ ಅಧಿಕಾರಿಗೆ ಸಚಿವ ವೆಂಕಟರಮಣಪ್ಪ ಕ್ಲಾಸ್

ಚಿತ್ರದುರ್ಗ: ಚಿತ್ರದುರ್ಗ ಉಸ್ತುವಾರಿ ಸಚಿವ ವೆಂಕಟರಮಣಪ್ಪ ತಪ್ಪು ವರದಿ ಕೊಟ್ಟ ಅಧಿಕಾರಿಗಳಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬರ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಬಿಸಿ ಮುಟ್ಟಿಸಿದ್ದಾರೆ. ವೆಂಕಟರಮಣಪ್ಪ ಅವರು ಪರಿಶೀಲನೆಗೆ ಬಂದ ವೇಳೆ ಅಧಿಕಾರಿಗಳು ತಪ್ಪು ವರದಿಯನ್ನು ತೋರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಚಿವರು, ನಿನ್ ತಲೆ, ನಿನ್ ನೇಣು ಹಾಕಬೇಕು. ಸುಳ್ಳು ಹೇಳಿದರೆ ಬರೆ ಎಳಿಬೇಕಾಗುತ್ತೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಚಳ್ಳಕೆರೆ ಎಇಇ ಭೀಮಾ ನಾಯಕ್‍ಗೆ ತರಾಟೆಗೆ ತೆಗೆದುಕೊಂಡು, ಬಳಿಕ ಹಿರಿಯೂರು ಎಕ್ಸಿಕ್ಯುಟಿವ್ ಎಂಜಿನಿಯರ್ ಗೂ ಎಚ್ಚರಿಕೆ ಕಾಮಗಾರಿ ತ್ವರಿತವಾಗಿ ಮುಗಿಸದಿದ್ದರೆ ಎತ್ತಂಗಡಿ ಮಾಡುತ್ತೀವಿ ಎಂದು ಎಚ್ಚರಿಕೆ ನೀಡಿದರು.

ಅಷ್ಟೇ ಅಲ್ಲದೆ ಇಂದು ಜಿಲ್ಲೆಯ ರೈತರು ನಡೆಸಿದ ಪ್ರತಿಭಟನೆಯ ಬಿಸಿ ಸಚಿವರಿಗೆ ತಟ್ಟಿದೆ. ಹೌದು. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ಬೆಳೆ ವಿಮೆ ಹಾಗೂ ಬೆಳೆ ನಷ್ಟ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಲು ವಿಳಂಬ ಮಾಡಲಾಗುತ್ತಿದೆ. ಇದರಿಂದ ಆಕ್ರೋಶಗೊಂಡ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತರು ರಾಜ್ಯ ಸರ್ಕಾರ ಹಾಗೂ ಉಸ್ತುವಾರಿ ಸಚಿವರ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಈ ವೇಳೆ ಬೆಳೆ ವಿಮೆ ಅನುದಾನ ತುರ್ತಾಗಿ ಬಿಡುಗಡೆ ಮಾಡುವಂತೆ ರೈತರು ಒತ್ತಾಯಿಸಿದ್ದು, ರೈತರ ಬಳಿಗೆ ಧಾವಿಸಿದ ಸಚಿವರು ಈ ಬಗ್ಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು ಹಾಗು ಶೀಘ್ರವಾಗಿ ಸಮಸ್ಯೆ ಬಗೆಹರಿಸುತ್ತೇವೆಂಬ ಭರವಸೆಯನ್ನ ನೀಡಿದರು. ಕೆಲವು ರೈತರು ತಕ್ಷಣ ಬರ ಪರಿಹಾರ ಹಣಕ್ಕೆ ವ್ಯವಸ್ಥೆ ಮಾಡಬೇಕು. ಈಗಾಗಲೇ ನಮ್ಮ ಕುಟುಂಬಸ್ಥರ ಒಡವೆಗಳನ್ನು ಅಡವಿಟ್ಟು ಬೆಳೆ ಬೆಳೆದರೂ ಸಹ ಬೆಳೆನಾಶದಿಂದ ನಾವು ಹಾಳಾಗಿದ್ದೇವೆ ಹೀಗಾಗಿ ಕೂಡಲೇ ನಷ್ಟ ಪರಿಹಾರ ಬಿಡುಗಡೆ ಮಾಡುವಂತೆ ಪಟ್ಟು ಹಿಡಿದರು. ಆಗ ರೈತರು ಹಾಗೂ ಸಚಿವರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ನಾನು ಸಹ ನಿಮ್ಮಂತೆ ರೈತ ಸಮಾಧಾನವಾಗಿರಿ ಎಂದು ಸಚಿವ ಪರಿಸ್ಥಿತಿ ತಿಳಿಗೊಳಿಸಿದರು.

Comments

Leave a Reply

Your email address will not be published. Required fields are marked *