ನಿರಾಶ್ರಿತ ಕೇಂದ್ರದಿಂದ ಸಂತ್ರಸ್ತರನ್ನು ಹೊರ ಕಳುಹಿಸಲು ಸರ್ಕಾರದ ಪ್ಲಾನ್

ಮಡಿಕೇರಿ: ಭೀಕರ ಪ್ರವಾಹದಿಂದಾಗಿ ಮನೆ, ಮಠ ಕಳೆದುಕೊಂಡಿರುವ ಸಂತ್ರಸ್ತರು ನಿರಾಶ್ರಿತ ಕೇಂದ್ರದಲ್ಲಿ ವಾಸವಿದ್ದಾರೆ. ಇದೀಗ ಅವರನ್ನು ಹೊರಗೆ ಕಳುಹಿಸಲು ಸರ್ಕಾರ ಮುಂದಾಗಿದ್ದು, ಬಿಡಿಗಾಸು ನೀಡಿ ಸ್ಥಳಾಂತರಗೊಳ್ಳುವಂತೆ ಸೂಚಿಸುತ್ತಿದೆ.

ಇತ್ತೀಚೆಗಷ್ಟೇ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ನಿರಾಶ್ರಿತರ ಕೇಂದ್ರಕ್ಕೆ ವಸತಿ ಸಚಿವ ಸೋಮಣ್ಣ ಭೇಟಿ ನೀಡಿದ್ದರು. ಈ ವೇಳೆ ಸೋಮಣ್ಣ ಅವರು ಹೇಳಿಕೆ ನೀಡಿದ್ದು, ಎರಡು ಕಂತುಗಳಲ್ಲಿ ನಿಮಗೆ 50 ಸಾವಿರ ರೂ. ಕೊಡುತ್ತೇವೆ. ನಿರಾಶ್ರಿತ ಶಿಬಿರದಿಂದ ಹೋಗಿ ಎಲ್ಲಾದರು ಇರಿ. ನಿರಾಶ್ರಿತ ಕೇಂದ್ರಗಳು ಶಾಲೆಯಲ್ಲಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ನೀವು ಹೊರಹೋಗಲು ನಾವು ಏನು ಮಾಡಬೇಕು ಹೇಳಿ ಎಂದು ಸಚಿವ ಸೋಮಣ್ಣ ಪ್ರಶ್ನಿಸಿದ್ದರು.

ಹತ್ತು ತಿಂಗಳಲ್ಲಿ ಮನೆ ನಿರ್ಮಿಸಿ ಕೊಡುತ್ತೇವೆ. ಸದ್ಯ ಗುಡಿಸಲು ನಿರ್ಮಾಣಕ್ಕೆ 25 ಸಾವಿರದಂತೆ 2ಕಂತುಗಳಲ್ಲಿ 50 ಸಾವಿರ ಕೊಡುತ್ತೇವೆ. ನೀವು ನಿರಾಶ್ರಿತ ಕೇಂದ್ರದಿಂದ ಹೊರಹೋಗಿ ಎಲ್ಲಾದರೂ ಇರಿ ಎಂದು ಸೂಚಿಸಿದ್ದಾರೆ.

ನದಿ ತಟದಲ್ಲಿ ಮನೆ ಕಳೆದುಕೊಂಡು ನಿರಾಶ್ರಿತ ಕೇಂದ್ರದಲ್ಲಿರುವ ಜಿಲ್ಲೆಯ 58 ಕುಟುಂಬಸ್ಥರಿಗೆ ಹೊರ ಹೋಗುವಂತೆ ಸೋಮಣ್ಣ ಸೂಚಿಸಿದ್ದಾರೆ. ಆದರೆ ಶಾಶ್ವತ ಸೂರು ಕಲ್ಪಿಸಿಕೊಡುವ ವರೆಗೆ ನಿರಾಶ್ರಿತ ಶಿಬಿರ ಬಿಟ್ಟು ಕದಲುವುದಿಲ್ಲ ಎಂದು ಸಂತ್ರಸ್ತರು ಹಠ ಹಿಡಿದಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಉಂಟಾದ ಪ್ರವಾಹದಲ್ಲಿ ಕುಂಬಾರಗುಂಡಿ, ಬೆಟ್ಟಕಾಡು ಸೇರಿದಂತೆ ವಿವಿಧ ಗ್ರಾಮಗಳ ಸಂತ್ರಸ್ತರು ಮನೆಗಳನ್ನು ಕಳೆದುಕೊಂಡಿದ್ದಾರೆ. ಪ್ರಸ್ತುತ ನಿರಾಶ್ರಿತರ ಕೇಂದ್ರದಲ್ಲಿ ವಾಸಿಸುತ್ತಿದ್ದಾರೆ. ಬಹುತೇಕ ಕೇಂದ್ರಗಳು ಶಾಲಾ ಕಟ್ಟಡಗಳಲ್ಲೇ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಖಾಲಿ ಮಾಡಿ ಎಂದು ಸಚಿವರು ಮನವೊಲಿಸಲು ಯತ್ನಿಸಿದರು. ಆದರೆ ಸಂತ್ರಸ್ತರು ಒಪ್ಪಿಲ್ಲ. ಶಾಶ್ವತ ಸೂರು ಕಲ್ಪಿಸಿ ಕೊಡುವವರೆಗೆ ನಿರಾಶ್ರಿತರ ಕೇಂದ್ರ ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ.

Comments

Leave a Reply

Your email address will not be published. Required fields are marked *