ಮನ್ಸೂರ್ ಖಾನ್‍ಗೆ ಬ್ಯಾಂಕಿಂದ ಲೋನ್ ಕೊಡಿಸಲು ಯತ್ನ – ಎನ್‍ಒಸಿ ಕೊಡಿಸಲು ಸಚಿವರ ದುಸ್ಸಾಹಸ

– ಐಎಎಸ್ ಅಧಿಕಾರಿ ದಿಟ್ಟತನಕ್ಕೆ ಉಳೀತು ಬ್ಯಾಂಕ್ ಕಾಸು

ಬೆಂಗಳೂರು: ಐಎಂಎ ಮಾಲೀಕ ಮನ್ಸೂರ್ ಖಾನ್ ಸಚಿವರನ್ನೇ ಮರಳು ಮಾಡಿ ಕೋಟಿ ಕೋಟಿ ಹಣ ಕೊಳ್ಳೆ ಹೊಡೆಯಲು ಮುಂದಾಗಿದ್ದನು ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಮನ್ಸೂರ್ ಖಾನ್ ತನ್ನ ಕಂಪನಿಯನ್ನು ಅಭಿವೃದ್ಧಿಗೊಳಿಸಲು 600 ಕೋಟಿ ಸಾಲ ಪಡೆಯುವುದಕ್ಕೆ ಪ್ಲಾನ್ ಮಾಡಿಕೊಂಡಿದ್ದನು. 600 ಕೋಟಿ ಸಾಲಕ್ಕಾಗಿ ಮನ್ಸೂರ್ ಬ್ಯಾಂಕ್‍ಗಳ ಮೊರೆ ಹೋಗಿದ್ದನು. ಆದರೆ ಬ್ಯಾಂಕ್ ಗಳು ಮಾತ್ರ ನಿನ್ನ ಕಂಪನಿಯ ಮೇಲೆ ನಮಗೆ ನಂಬಿಕೆ ಇಲ್ಲ. ನಿನ್ನದು ದೋಖಾ ಕಂಪನಿ ಎಂದು ಈಗಾಗಲೇ ಆರ್ ಬಿಐ ನೋಟಿಸ್ ನೀಡಿದೆ. ನಿನ್ನ ಕಂಪನಿಗೆ ಸಾಲ ಕೊಡುವುದಕ್ಕೆ ಆಗುವುದಿಲ್ಲ. ಸಾಲ ಕೊಡಬೇಕೆಂದರೆ ರಾಜ್ಯ ಸರ್ಕಾರದಿಂದ ಎನ್‍ಓಸಿ ತರಬೇಕು ಎಂದು ಹೇಳಿದ್ದರು.

ತಕ್ಷಣ ಮನ್ಸೂರ್ ಮುಸ್ಲಿಂ ಸಮುದಾಯದ ಸಚಿವರೊಬ್ಬರ ಮುಖಾಂತರ ಫೀಲ್ಡ್ ಗೆ ಇಳಿದಿದ್ದನು. ಹೇಗಾದರೂ ಮಾಡಿ 600 ಕೋಟಿ ಪಡೆಯಲೇಬೇಕು ಎನ್ನುವುದು ಆತನ ಹೆಬ್ಬಯಕೆ ಆಗಿತ್ತು. ಮುಸ್ಲಿಂ ಸಚಿವರು ಮನ್ಸೂರ್ ಪರ ಲಾಭಿ ನಡೆಸಿ ಹಿರಿಯ ಸಚಿವರಿಗೆ ದುಂಬಾಲು ಬಿದ್ದಿದ್ದರು. ಪ್ರತಿ ಬಾರಿಯೂ ಮುಖ್ಯಮಂತ್ರಿ ಆಗುತ್ತೇನೆ ಎನ್ನುವ ಭರವಸೆಯಲ್ಲಿದ್ದ ಸಚಿವರೇ ಮನ್ಸೂರ್ ಗೆ ಮರುಳಾಗಿದ್ದರು. ಮನ್ಸೂರ್ ಕಂಪನಿಗೆ ಸಾಲ ಕೊಡಿಸೋಣ, ಸಾಲ ಕೊಡೋದಕ್ಕೆ ಎನ್‍ಓಸಿ(ನಿರಾಕ್ಷೇಪಣಾ ಪತ್ರ) ಕೊಡಿ ಎಂದು ಐಎಎಸ್ ಅಧಿಕಾರಿಗೆ ಸೂಚನೆ ನೀಡಿದ್ದರು.


ಸಚಿವರು ಸೂಚನೆಯನ್ನೇ ಧಿಕ್ಕರಿಸಿದ ಅಧಿಕಾರಿ, ಇಲ್ಲ ಸಾರ್ ಎನ್‍ಓಸಿ ಕೊಡುವುದಕ್ಕೆ ಆಗೋದಿಲ್ಲ. ಮನ್ಸೂರ್ ಮೇಲೆ ಸಾಕಷ್ಟು ಆರೋಪ ಇದೆ. ಈಗ ಎನ್‍ಓಸಿ ಕೊಟ್ಟರೆ ಮುಂದೆ ನಾನು ಜೈಲಿಗೆ ಹೋಗುತ್ತೇನೆ. ಏನೇ ಆದರೂ ನಾನು ಎನ್‍ಓಸಿ ನೀಡೋದಿಲ್ಲ ಎಂದು ಖಡಕ್ ಅಧಿಕಾರಿ ಧಿಕ್ಕರಿಸಿ ನಿಂತಿದ್ದರು. ಅಧಿಕಾರಿಯ ಧಿಕ್ಕಾರದಿಂದ ಬ್ಯಾಂಕ್ ಗಳ 600 ಕೋಟಿ ಹಣ ಉಳಿಯಿತು. ಇಲ್ಲದೇ ಇದ್ದಿದ್ರೆ ಈತ ಕೂಡ ಮಲ್ಯನ ರೀತಿ ಬ್ಯಾಂಕ್‍ಗೆ ದೋಖಾ ಮಾಡಿ ಎಸ್ಕೇಪ್ ಆಗುತ್ತಿದ್ದನು ಎಂಬುದಾಗಿ ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *