ಖೇಲೋ ಇಂಡಿಯಾ ಆ್ಯಪ್‍ನಲ್ಲಿ 22 ಭಾಷೆಗಳನ್ನು ಸೇರಿಸಿ- ಕೇಂದ್ರಕ್ಕೆ ಸುರೇಶ್ ಕುಮಾರ್ ಪತ್ರ

ಬೆಂಗಳೂರು: ಖೇಲೋ ಇಂಡಿಯಾ ಆ್ಯಪ್‍ನಲ್ಲಿ 22 ಭಾಷೆಗಳ ಆಯ್ಕೆಯನ್ನು ನೀಡುವ ಮೂಲಕ ಇತರರಿಗೆ ಬೇಗ ಅರ್ಥವಾಗುವಂತೆ ಅನುಕೂಲ ಮಾಡಿಕೊಡಬೇಕೆಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಕೇಂದ್ರ ಯುವಜನಸೇವೆ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಅವರಿಗೆ ಸುರೇಶ್ ಕುಮಾರ್ ಪತ್ರ ಬರೆದು ಮನವಿ ಮಾಡಿದ್ದಾರೆ. ಖೇಲೋ ಇಂಡಿಯಾ ಆ್ಯಪ್‍ನ್ನು 22 ಭಾಷೆಗಳಲ್ಲಿ ದೊರೆಯುವಂತೆ ಮಾಡುವ ಮೂಲಕ ಪ್ರಾದೇಶಿಕ ಯುವಕರಿಗೆ ಬೇಗನೇ ಮಾಹಿತಿ ದೊರೆಯಲು ಅನುಕೂಲ ಮಾಡಿಕೊಡಬೇಕು. ಪ್ರಸ್ತುತ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಮಾಹಿತಿ ದೊರೆಯುತ್ತಿದೆ. ಪ್ರಾದೇಶಿಕ ಭಾಷೆಗಳಲ್ಲಿಯೂ ಮಾಹಿತಿ ದೊರೆಯುವಂತೆ ಮಾಡಬೇಕು. ಇದರಿಂದ ಹಿಂದಿ-ಇಂಗ್ಲಿಷ್ ತಿಳಿಯದ ಯುವ ಸಮೂಹಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಸಂವಿಧಾನಿಕವಾಗಿ ಮಾನ್ಯತೆ ಪಡೆದಿರುವ ಎಲ್ಲ 22 ಭಾಷೆಗಳಲ್ಲೂ ಎಲ್ಲ ರೀತಿಯ ಮಾಹಿತಿ ಸಿಗಬೇಕು. ಎಲ್ಲ ಭಾಷೆಯಲ್ಲೂ ಸಿಕ್ಕರೆ ದೇಶವ್ಯಾಪಿಯಾಗಿ ಸುಲಭವಾಗಿ ಎಲ್ಲರಿಗೂ ತಿಳಿಯುತ್ತದೆ. ಹೆಚ್ಚು ಜನ ಇದರ ಸದುಪಯೋಗ ಪಡೆಯುತ್ತಾರೆ. ಹೀಗಾಗಿ 22 ಭಾಷೆಗಳಲ್ಲೂ ಆ್ಯಪ್ ದೊರೆಯುವಂತೆ ಮಾಡಿ ಎಂದು ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.

ಇದೇ ವೇಳೆ ಗುಣಾತ್ಮಕ ಶಿಕ್ಷಣ ಅನುಷ್ಠಾನಕ್ಕೆ ವೇಳಾಪಟ್ಟಿ ರಚಿಸಲು ಸಲಹಾ ಸಮಿತಿ ರಚಿಸುವಂತೆ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ. ರಾಜ್ಯ ಮಟ್ಟದ ಸಲಹಾ ಮಂಡಳಿ ರಚಿಸುವಂತೆ ಪ್ರಾಥಮಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಸೂಚನೆ ನೀಡಿದ್ದಾರೆ. ಈ ಕುರಿತು ಒಂದು ವಾರದಲ್ಲಿ ವರದಿ ನೀಡುವಂತೆ ಸಮಯವನ್ನು ನಿಗದಿಪಡಿಸಿದ್ದಾರೆ. ದಸರಾ ಮುಗಿದ ಕೂಡಲೇ ಗುಣಾತ್ಮಕ ಶಿಕ್ಷಣ ಅಭಿಯಾನ ಪ್ರಾರಂಭವಾಗಬೇಕು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *