ಲಾಕ್‍ಡೌನ್ ಮುಗಿದ ನಂತ್ರ ಎಸ್‍ಎಸ್‍ಎಲ್‍ಸಿ ಪರೀಕ್ಷೆ – ಸುರೇಶ್ ಕುಮಾರ್ ಸ್ಪಷ್ಟನೆ

– ರಾಮನಗರ ಜೈಲಿಗೆ ಶಿಪ್ಟ್ ಮಾಡಿದ್ದು ಆಡಳಿತಾತ್ಮಕ ನಿರ್ಣಯ

ಚಾಮರಾಜನಗರ: ಲಾಕ್‍ಡೌನ್ ಮುಗಿದ ನಂತರ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾಡಲಾಗುತ್ತದೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.

ನಗರದಲ್ಲಿ ಮಾತನಾಡಿದ ಸುರೇಶ್ ಕುಮಾರ್, ಪರೀಕ್ಷೆಯನ್ನು ಯಾವ ಸಮಯದಲ್ಲಿ ಮಾಡಬೇಕು, ಮಕ್ಕಳಿಗೆ ಎಷ್ಟು ಸಮಯ ಕೊಡಬೇಕು ಎಂಬುದನ್ನು ನಂತರ ತೀರ್ಮಾನ ಮಾಡುತ್ತೇವೆ. ಎಸ್‍ಎಸ್‍ಎಲ್ ಸಿ ಪರೀಕ್ಷೆಗಿಂತ ದೊಡ್ಡದು ಕೊರೊನಾ ವಿರುದ್ಧ ಹೋರಾಡುವ ಪರೀಕ್ಷೆ. ಮೇ 3 ರ ನಂತರ ಇದರ ಬಗ್ಗೆ ಯೋಚಿಸುತ್ತೇವೆ. ಕೆಲವರು ಪರೀಕ್ಷೆ ಅನುಮಾನವೆಂದು ಗೊಂದಲ ಮೂಡಿಸುತ್ತಿದ್ದಾರೆ. ಆದರೆ ಪರೀಕ್ಷೆ ನಡೆಯುತ್ತದೆ. ಮಕ್ಕಳ ಮನಸ್ಸಿನಲ್ಲಿ ಪರೀಕ್ಷೆ ಬಗ್ಗೆ ಗೊಂದಲವಿಲ್ಲ. ಆದರೆ ಪೋಷಕರಲ್ಲಿ ಆತಂಕ ಇದೆ. ಮೇ 3ರ ನಂತರ ಒಂದು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಪಾದರಾಯನಪುರ ಗಲಾಟೆ ಆರೋಪಿಗಳನ್ನು ರಾಮನಗರ ಜೈಲಿಗೆ ಶಿಪ್ಟ್ ಮಾಡಿದ ನಂತರ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಇದರಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕೆಪಿಸಿಸಿ ಡಿಕೆಶಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೀಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪಾದರಾಯನಪುರ ಗಲಾಟೆ ಆರೋಪಿಗಳನ್ನು ಶಿಪ್ಟ್ ಮಾಡಿದ್ದು ಆಡಳಿತಾತ್ಮಕ ನಿರ್ಣಯ ಎಂದಿದ್ದಾರೆ.

ಈ ವಿಚಾರದಲ್ಲಿ ರಾಜಕೀಯ ಮಾಡೋದು ಸರಿಯಲ್ಲ. ಕೊರೊನಾ ವಿರುದ್ಧದ ಹೋರಾಟದಲ್ಲಿ ರಾಜಕೀಯ ಬೇಡ. ರಾಜ್ಯ ಸರ್ಕಾರ ಯಾವುದೋ ಒಂದು ಜಿಲ್ಲೆಯನ್ನ ರೆಡ್ ಝೋನ್ ಮಾಡಲು ಕರೆದುಕೊಂಡು ಹೋಗಲ್ಲ. ಯಾವುದೋ ನಿರ್ಧಾರ ಹೆಚ್ಚು ಕಮ್ಮಿಯಾಗಿದೆ ಎಂದರು.

Comments

Leave a Reply

Your email address will not be published. Required fields are marked *