ಅತ್ಯಂತ ಕೆಳಮಟ್ಟದ ಮಾನಸಿಕತೆ ಇರುವ ವ್ಯಕ್ತಿ ಸಿಎಂ ಆಗಿದ್ದಕ್ಕೆ ಕನಿಕರ ಆಗ್ತಿದೆ – ಸುರೇಶ್‍ಕುಮಾರ್

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಬಂದಿದ್ದೇ ಇಸ್ರೋಗೆ ಅಪಶಕುನ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿರುಗೇಟು ನೀಡಿದ್ದಾರೆ.

ಗಂಗಾವತಿಯಲ್ಲಿ ಮಾತನಾಡಿದ ಸುರೇಶ್ ಅವರು, ನನಗೆ ಬಹಳ ದುಃಖ ಆಗುತ್ತಿದೆ. ಏಕೆಂದರೆ ಇಂತಹ ಅತ್ಯಂತ ಕೆಳಮಟ್ಟದ ಮಾನಸಿಕ ವ್ಯಕ್ತಿತ್ವ ಇರುವ ವ್ಯಕ್ತಿ ನಮ್ಮ ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಕೆಲಸ ಮಾಡಿದ್ರಲ್ಲ ಎಂದು ಕನಿಕರ ಬರುತ್ತಿದೆ. ಇಸ್ರೋಗೆ ನರೇಂದ್ರ ಮೋದಿ ಅವರು ಹೋದಾಗ ಹಾಗೂ ಕೇವಲ 400 ಮೀ. ದೂರದಲ್ಲಿ ಸಂಪರ್ಕ ಕಳೆದುಹೋದಾಗ ಮೋದಿ ವಿಜ್ಞಾನಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇದನ್ನು ಇಡೀ ದೇಶವೇ ನೋಡಿದೆ. ಈ ಘಟನೆಯಿಂದ ಮೋದಿಯವರ ವ್ಯಕ್ತಿತ್ವ ಇನ್ನೂ ಎತ್ತರಕ್ಕೆ ಬೆಳದಿದೆ ಎಂದರು. ಇದನ್ನೂ ಓದಿ: ಪ್ರಧಾನಿ ಮೋದಿ ಬಂದಿದ್ದೇ ಇಸ್ರೋಗೆ ಅಪಶಕುನ: ಎಚ್‍ಡಿಕೆ

ಕುಮಾರಸ್ವಾಮಿ ಅವರು ಎಲ್ಲದರಲ್ಲೂ ರಾಜಕೀಯ ಬೆರೆಸುವುದು ಒಳ್ಳೆಯದು ಅಲ್ಲ. ರಾಜಕೀಯ ಬೆರುಸುವಂತಹ ವಿಚಾರದಲ್ಲಿ ಕುಮಾರಸ್ವಾಮಿ ಅವರು ರಾಜಕೀಯದ ಬಗ್ಗೆ ಮಾತನಾಡಲಿ. ಇಸ್ರೋಗೆ ಆದ ನೋವು ಇಡೀ ದೇಶ ಅನುಭವಿಸಿದೆ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ಒಟ್ಟಿಗೆ ಸೇರಿ ಸರ್ಕಾರ ಮಾಡಿದ್ದರು. ಸಿದ್ದರಾಮಯ್ಯ ಅವರು ಮೂಢನಂಬಿಕೆ ನಿಷೇಧ ಕಾನೂನು ತಂದಿದ್ದಾರೆ. ಈಗ ಕುಮಾರಸ್ವಾಮಿ ಈ ರೀತಿ ಮಾತನಾಡುತ್ತಿರುವುದು ಕೂಡ ಮೂಢನಂಬಿಕೆಯೇ. ಹಾಗಾಗಿ ಕುಮಾರಸ್ವಾಮಿ ಅವರು ಇದನ್ನು ಎಚ್ಚರದಲ್ಲಿ ಇಟ್ಟುಕೊಂಡು ಮಾತನಾಡಲಿ ಎಂದು ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಹೇಳಿದ್ದೇನು?
ಪ್ರಧಾನಿ ಮೋದಿ ಅವರು ಪ್ರಚಾರಕ್ಕಾಗಿ ಚಂದ್ರಯಾನ-2ನ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವ ತಲುಪುವ ಕ್ಷಣವನ್ನು ವೀಕ್ಷಿಸಲು ಇಸ್ರೋ ಕಚೇರಿಗೆ ಬಂದಿದ್ದರು. ಈ ಸಾಧನೆಯನ್ನು ತಾವೇ ಮಾಡಿದ್ದಾಗಿ ಬಿಂಬಿಸುವುದಕ್ಕೆ ಬಂದಿದ್ದರು. ಆದರೆ ಅಲ್ಲಿ ಅವರು ಕಾಲಿಟ್ಟಿದ್ದು ಇಸ್ರೋ ವಿಜ್ಞಾನಿಗಳಿಗೆ ಎಲ್ಲೋ ಒಂದು ಕಡೆ ಅಪಶಕುನ ಉಂಟಾಯಿತೋ ಏನೋ ಗೊತ್ತಿಲ್ಲ. ವಿಕ್ರಂ ಲ್ಯಾಂಡರ್ ಸರಿಯಾಗಿ ಲ್ಯಾಂಡ್ ಆಗಲಿಲ್ಲ ಎಂದು ಹೇಳಿದ್ದರು. ಅಲ್ಲದೆ ರಾಜ್ಯಕ್ಕೆ ಪ್ರವಾಹ ಪರಿಹಾರ ಕಲ್ಪಿಸದ ಪ್ರಧಾನಿ ಮೋದಿ ರಷ್ಯಾಗೆ ಸಾಲ ಕೊಡುತ್ತಾರೆ. ಮೋದಿ ಅವರ ಮುಂದೆ ಮಾತನಾಡುವುದಕ್ಕೆ ರಾಜ್ಯ ಬಿಜೆಪಿ ನಾಯಕರು ಹೆದರುತ್ತಾರೆ ಎಂದು ಹೇಳುವ ಸಂದರ್ಭದಲ್ಲಿ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

Comments

Leave a Reply

Your email address will not be published. Required fields are marked *