ಚುನಾವಣೆ ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಬೇಡಿ – ಆಯೋಗಕ್ಕೆ ಸುರೇಶ್ ಕುಮಾರ್ ಪತ್ರ

ಬೆಂಗಳೂರು: ಚುನಾವಣೆ ಕೆಲಸಗಳಿಗೆ ಶಿಕ್ಷರನ್ನು ಬಳಸಿಕೊಳ್ಳದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

ಕರ್ನಾಟಕ ಮುಖ್ಯ ಚುನಾವಣೆ ಆಯೋಗಕ್ಕೆ ಈ ಕುರಿತು ಸುರೇಶ್ ಕುಮಾರ್ ಅವರು ಪತ್ರ ಬರೆದಿದ್ದು, ಚುನಾವಣೆ ಪ್ರಕ್ರಿಯೆ ಸೇರಿದಂತೆ ಹಲವು ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಪಾಠಗಳು ಸರಿಯಾದ ಸಮಯಕ್ಕೆ ಮುಗಿಯುತ್ತಿಲ್ಲ. ಶಿಕ್ಷಕರಿಗೆ ಶಾಲಾ ಚಟುವಟಿಕೆಗಳಲ್ಲಿ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಿಕ್ಷಕರನ್ನು ಚುನಾವಣೆ ಕೆಲಸಗಳಿಗೆ ಬಳಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

ಇತರೆ ಕೆಲಸಗಳಿಂದ ಶಿಕ್ಷಕರಿಗೆ ವಿದ್ಯಾರ್ಥಿಗಳ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಿಕ್ಷಕರನ್ನು ಚುನಾವಣೆ ಕೆಲಸ ಹಾಗೂ ಮತಹಾಕಿಸುವ ಬಿಎಲ್‍ಓ ದಂತಹ ಕೆಲಸಗಳಿಂದ ವಿಮುಕ್ತಿಗೊಳಿಸಬೇಕು ಎಂದು ಚುನಾವಣೆ ಆಯೋಗಕ್ಕೆ ಬರೆದ ಪತ್ರದಲ್ಲಿ ಸಚಿವ ಸುರೇಶ್ ಕುಮಾರ್ ಉಲ್ಲೇಖಿಸಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೈತ್ರಿ ಸರ್ಕಾರ ಕೆಡವಿದ್ದ 17 ಅನರ್ಹ ಶಾಸಕರ ಕ್ಷೇತ್ರಗಳ ಪೈಕಿ ಆರ್.ಆರ್ ನಗರ, ಮಸ್ಕಿ ಹೊರತುಪಡಿಸಿ 15 ಕ್ಷೇತ್ರಗಳ ಉಪಚುನಾವಣೆಗೆ ಭರದ ಸಿದ್ಧತೆ ನಡೆದಿದೆ. ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೇರೂರು, ರಾಣೆಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆ.ಆರ್. ಪೇಟೆ, ಹುಣಸೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ.

ಸೋಮವಾರದಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ನ.18 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನ.19ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ನ.21 ರಂದು ನಾಮಪತ್ರ ವಾಪಸ್‍ಗೆ ಕಡೆಯ ದಿನವಾಗಿದೆ. ಡಿಸೆಂಬರ್ 5 ರಂದು ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಡಿ.9 ರಂದು ಮತ ಎಣಿಕೆ ನಡೆಯಲಿದೆ.

Comments

Leave a Reply

Your email address will not be published. Required fields are marked *