ಖಾತೆ ಬಳಿಕ ಕಾರು – ಸಚಿವ ಶ್ರೀಮಂತ ಪಾಟೀಲ್ ‘ಜಪಾನ್ ಲವ್’ ಸ್ಟೋರಿ

ಬೆಂಗಳೂರು: ಯಡಿಯೂರಪ್ಪ ಸಂಪುಟದಲ್ಲಿ ಬಿಜೆಪಿಯ ನೂತನ ಶಾಸಕರಿಗೆ ಕೊನೆಗೂ ಮಂತ್ರಿಗಿರಿ ನೀಡಲಾಗಿದೆ. ಈಗ ಮಂತ್ರಿಗಳು ಕಾರು ವಿಚಾರದಲ್ಲೂ ಪಟ್ಟು ಹಿಡಿದಿದ್ದಾರೆ. ಸಚಿವ ಶ್ರೀಮಂತ ಪಾಟೀಲ್ ಅವರು ತಮಗೆ ಮೇಡ್ ಇನ್ ಜಪಾನ್ ಇಂಜಿನ್ ಇರುವ ಇನ್ನೋವಾ ಕಾರು ಬೇಕು ಎಂದು ಹಠ ಹಿಡಿದಿದ್ದಾರೆ.

ಫೆಬ್ರವರಿ 6ರಂದು ಸಚಿವರಾದ ಶ್ರೀಮಂತ ಪಾಟೀಲ್ ಅವರಿಗೆ ಡಿಪಿಆರ್ ನಿಂದ ಕೆಎ-51 ಜಿ- 9333 ಸಂಖ್ಯೆಯ 2015ರ ಮಾಡೆಲ್‍ನ ಬಿಳಿ ಬಣ್ಣದ ಇನ್ನೋವಾ ಕಾರು ನೀಡಲಾಗಿದೆ. 2015ರ ಮಾಡೆಲ್ ಇನ್ನೋವಾ ಕಾರಿನ ಇಂಜಿನ್ ಮೇಡ್ ಇನ್ ಇಂಡಿಯಾದ್ದು. ಆದರೆ ಶ್ರೀಮಂತ ಪಾಟೀಲ್ ಅವರು ಮೇಡ್ ಇನ್ ಇಂಡಿಯಾ ಇಂಜಿನ್ ಕಾರು ಬೇಡ ನನಗೆ ಮೇಡ್ ಇನ್ ಜಪಾನ್ ಇಂಜಿನ್ ಇರುವ ಇನ್ನೋವಾ ಕಾರು ಬೇಕು ಎಂದು ಹಠ ಹಿಡಿದಿದ್ದಾರೆ.

ಎಲ್ಲಾ ಸಚಿವರು ಹೊಸ ಕಾರು ಬೇಕು ಎಂದರೆ ಶ್ರೀಮಂತ ಪಾಟೀಲ್ ಮಾತ್ರ ಇನ್ನು ಹಳೆ ಮಾಡೆಲ್ ಕಾರು ಕೊಡಿ ಎಂದು ಪಟ್ಟು ಹಿಡಿದಿದ್ದಾರೆ. 2015ಕ್ಕೂ ಮೊದಲಿನ ಇನ್ನೋವಾ ಕಾರುಗಳೆಲ್ಲಾ ಇಂಜಿನ್ ಮೇಡ್ ಇನ್ ಜಪಾನ್. ನನಗೆ ಅದೇ ಕಾರು ಬೇಕು ಎಂದು 7 ದಿನಗಳ ಕಾಲ ಸತತವಾಗಿ ಕಾರು ಹುಡುಕಿಸಿದ್ದಾರೆ. ಜಪಾನ್ ಮೇಡ್ ಇಂಜಿನ್ ಆದರೆ ಹೆವಿ ಲೋಡ್ ತಡೆಯುತ್ತೆ. ಜೊತೆಗೆ ಓಡಾಟವು ಆರಾಮದಾಯಕವಾಗಿರುತ್ತೆ. ಹೆಚ್ಚು ಶಬ್ಧವೂ ಇರಲ್ಲ ಎನ್ನುವುದು ಸಚಿವ ಶ್ರೀಮಂತ ಪಾಟೀಲ್ ಅವರ ವಾದ.

ಸಚಿವರ ಹಳೆ ಕಾರಿನ ಬೇಡಿಕೆ, ಜಪಾನ್ ಮೇಡ್ ಇನ್ ಇಂಜಿನ್‍ಗಾಗಿ ಹುಡುಕಿ ಹುಡುಕಿ ಸುಸ್ತಾದ ಡಿಪಿಆರ್ ಅಧಿಕಾರಿಗಳು ಕೊನೆಗೂ ಕಾರನ್ನು ಹುಡುಕಿ ಕೊಟ್ಟಿದ್ದಾರೆ. ಕೆಎ-05 ಜಿಎ- 9 ಸಂಖ್ಯೆಯ 2013ರ ಮಾಡೆಲ್‍ನ ಗ್ರೇ ಕಲರ್ ಇನ್ನೋವಾ ಹುಡುಕಿ ಗುರುವಾರ ಸಚಿವರಿಗೆ ತೋರಿಸಿದ್ದಾರೆ. ಜಪಾನ್ ಮೇಡ್ ಇಂಜಿನ್ ಇರುವ ಕಾರು ಕಂಡು ಶ್ರೀಮಂತ ಪಾಟೀಲ್ ಖುಷಿಯಾಗಿದ್ದಾರೆ. 2015ರ ಮಾಡೆಲ್‍ಗಿಂತ 2 ವರ್ಷ ಹಳಯದಾದ 2013ರ ಮಾಡೆಲ್ ಕಾರು ಕಂಡು ಫುಲ್ ಫಿದಾ ಆಗಿದ್ದಾರೆ.

ಒಂದು ವಾರಗಳ ಕಾಲ ಡಿಪಿಎಆರ್ ಅಧಿಕಾರಿಗಳ ನೆಮ್ಮದಿ ಕೆಡಿಸಿದ್ದ ಸಚಿವ ಶ್ರೀಮಂತ ಪಾಟೀಲ್ ಕೊನೆಗೂ ಮೇಡ್ ಇನ್ ಜಪಾನ್ ಕಾರು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *