ಸದನದಲ್ಲಿ ಕಾಂಗ್ರೆಸ್ ಸಂಸದರ ಕ್ಷಮೆ ಕೋರಿದ ನಿತಿನ್ ಗಡ್ಕರಿ

ನವದೆಹಲಿ: ಕೇಂದ್ರ ಸಚಿವ ಸಚಿವ ನಿತಿನ್ ಗಡ್ಕರಿ ಲೋಕಸಭಾ ಸದನದ ವೇಳೆ ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರಲ್ಲಿ ಕ್ಷಮೆ ಕೇಳಿದ್ದಾರೆ.

ಮಧ್ಯಪ್ರದೇಶದ ಗುನಾ ಕ್ಷೇತ್ರದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಮುದ್ರಣ ಮಾಡಿಲ್ಲ ಹಾಗೂ ಕಾರ್ಯಕ್ರಮಕ್ಕೆ ತಮಗೇ ಆಹ್ವಾನ ನೀಡಿಲ್ಲ. ಯಾವುದೇ ಯೋಜನೆಯ ಉದ್ಘಾಟನೆಗೆ ಆ ಕ್ಷೇತ್ರದ ಜನಪ್ರತಿನಿಧಿಯನ್ನು ಆಹ್ವಾನಿಸುವುದು ಶಿಷ್ಟಾಚಾರ. ಆದರೆ ರಾಜ್ಯ ಸರ್ಕಾರ ತಮಗೇ ಆಹ್ವಾನ ನೀಡದೆ ಶಿಷ್ಟಾಚಾರ ಉಲ್ಲಂಘಿಸಿದೆ. ಅದ್ದರಿಂದ ಹಕ್ಕುಚ್ಯುತಿ ಮಂಡನೆ ಮಾಡುವುದಾಗಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಸದನದಲ್ಲಿ ಹೇಳಿದರು.

ಸಿಂಧಿಯಾ ಆರೋಪದ ಬಳಿಕ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಹಾಗೂ ಜಲ ಸಂಪ್ಮೂಲ ಸಚಿವ ನಿತಿನ್ ಗಡ್ಕರಿ ಮಾತನಾಡಿ, ಈ ತಪ್ಪಿನ ಕುರಿತು ನನಗೆ ಅರಿವಾಗಿದೆ. ಮುಂದೇ ಇಂತಹ ತಪ್ಪುಗಳು ನಡೆಯದಂತೆ ಎಚ್ಚರವಹಿಸಲಾಗುವುದು. ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ. ಅದ್ದರಿಂದ ತಾನು ಈ ತಪ್ಪಿನ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಸಂಸದರ ಹೆಸರು ಕಡ್ಡಾಯವಾಗಿ ಆಹ್ವಾನ ಪತ್ರಿಕೆಯಲ್ಲಿ ಮುದ್ರಣವಾಗಬೇಕಿತ್ತು. ಅಲ್ಲದೇ ಅವರಿಗೆ ಆಹ್ವಾನ ನೀಡಬೇಕಿತ್ತು. ಅದ್ದರಿಂದ ಸದನದಲ್ಲಿ ನಾನು ಕ್ಷಮೆ ಕೇಳುವುದಾಗಿ ಹೇಳಿದರು.

ಗಡ್ಕರಿ ಅವರ ಮಾತಿಗೆ ಸಮಾಧಾನಗೊಳ್ಳದ ಸಿಂಧಿಯಾ, ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಸ್ಪೀಕರ್ ಸುಮಿತ್ರಾ ಮಹಾಜನ್ ಗಡ್ಕರಿ ಅವರು ಈಗಾಗಲೇ ಸಭೆಯಲ್ಲಿ ಕ್ಷಮೆ ಕೇಳಿದ್ದರೆ ಎಂದರು. ಲೋಕಸಭಾ ಸದನ ವಿರೋಧಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ಸಂಸದರನ್ನು ಈ ರೀತಿ ನಡೆಸಿಕೊಳ್ಳುವುದು ಸೂಕ್ತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಈ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ. ಸದನದಲ್ಲಿ ಈಗಾಗಲೇ ಹಿರಿಯ ಸಚಿವರು ಕ್ಷಮೆ ಕೇಳಿದ್ದಾರೆ. ಯುಪಿಎ ಅವಧಿಯಲ್ಲೂ ಬಿಜೆಪಿ ಸಂಸದರಿಗೆ ಆಹ್ವಾನ ನೀಡದೆ ಹಲವು ಕಾರ್ಯಕ್ರಮ ನಡೆಸಲಾಗಿದೆ ಎಂದು ಹೇಳಿ ಈ ಚರ್ಚೆಗೆ ಪೂರ್ಣವಿರಾಮ ಹಾಕಿದರು.

Comments

Leave a Reply

Your email address will not be published. Required fields are marked *