ರಾಹುಲ್ ಗಾಂಧಿಯದ್ದು ನೆಹರೂ ರಕ್ತ, ಟೀಕೆ ಮಾಡುವ ಬಿಜೆಪಿ ಬ್ರಿಟಿಷರ ಜೊತೆ ಕೈ ಜೋಡಿಸಿತ್ತು: ರಮಾನಾಥ ರೈ ಗರಂ

ಉಡುಪಿ: ದೇಶದಲ್ಲಿ ಅಭಿಪ್ರಾಯ ಬೇಧವಿದೆ. ತಮ್ಮ ಸ್ವಂತ ಅಭಿಪ್ರಾಯ ಮಂಡಿಸಿದವರಿಗೆ ಸಸ್ಪೆಂಡ್ ಶಿಕ್ಷೆ ಎಂದು ಅರಣ್ಯ ಸಚಿವ ರಮಾನಾಥ ರೈ ತಿರುಗೇಟು ನೀಡಿದ್ದಾರೆ.

ಅರಣ್ಯ ಇಲಾಖೆಯ ವತಿಯಿಂದ ನಿರ್ಮಾಣವಾದ ಸಾಲುಮರದ ತಿಮ್ಮಕ್ಕ ಪಾರ್ಕ್ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು `ಬಂಡಲ್ ಶಾ’ ಎಂದು ಟೀಕಿಸಿದ್ದ ದ.ಕ ಜಿಲ್ಲೆ ಪುತ್ತೂರಿನ ಕಾನೂನು ವಿದ್ಯಾರ್ಥಿಯನ್ನು ಸಸ್ಪೆಂಡ್ ಮಾಡಲಾಗಿದೆ. ಇದು ಸರಿಯಲ್ಲ. ವಿದ್ಯಾರ್ಥಿಯಿಂದ ತಪ್ಪಾಗಿದ್ದರೆ ಕೂತು ಪರಿಹರಿಸಬಹುದಿತ್ತು ಅಂತ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಸಂಸ್ಥೆ ಸಮಾಜವನ್ನು ಸುಶಿಕ್ಷಿತರನ್ನಾಗಿಸಬೇಕು. ಅದು ಬಿಟ್ಟು ಸಸ್ಪೆಂಡ್ ಮಾಡಿದ್ದಾರೆ. ಅದು ಖಾಸಗಿ ಶಿಕ್ಷಣ ಸಂಸ್ಥೆ, ಅವರ ವಿವೇಚನೆ ಮೇಲೆ ಕ್ರಮ ಕೈಗೊಂಡಿದ್ದಾರೆ. ಅಸಹಿಷ್ಣುತೆ, ಅಭಿವ್ಯಕ್ತಿ ಸ್ವಾತಂತ್ಯ ವಿಚಾರ ಮಾತಾಡಿದಾಗ ಟೀಕಿಸುತ್ತಾರೆ. ಆದರೆ ಅಂತಹ ವಾತಾವರಣ ದೇಶದಲ್ಲಿರುವುದು ನಿಜ ಅಂದಿದ್ದಾರೆ.

ಶೋಭಾ ಕರಂದ್ಲಾಜೆಗೆ ಟಾಂಗ್: ಇದೇ ವೇಳೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಜ್ಯ ಪ್ರವಾಸವನ್ನು ಟೀಕಿಸಿದ್ದ ಶೋಭಾ ಕರಂದ್ಲಾಜೆಗೆ ರೈ ಟಾಂಗೆ ಕೊಟ್ಟರು. ರಾಹುಲ್ ಮೋತಿಲಾಲ್ ನೆಹರೂ ಕುಟುಂಬದ ರಕ್ತ. ರಾಹುಲ್ ಗಾಂಧಿಗೂ, ಬೇರೆಯವರಿಗೂ ಹೋಲಿಕೆ ಇಲ್ಲ. ಪಾರಂಪರಿಕ ಇತಿಹಾಸ ಇರುವುದು ಯಾರಿಗೆ ಅನ್ನೋದು ಜನರು ತಿಳಿದುಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟದ ಸಂದರ್ಭ ಬಿಜೆಪಿ, ಸಂಘ ಪರಿವಾರ ಬ್ರಿಟಿಷರ ಜೊತೆ ಕೈ ಜೋಡಿಸಿತ್ತು. ಕಾಂಗ್ರೆಸ್ ನಲ್ಲಿ ಯಾರೋ ಒಬ್ಬ ತಪ್ಪು ಮಾಡಿದ್ದಾರೆ, ಅವರಿಗೆ ತಕ್ಕ ಶಾಸ್ತಿಯಾಗಿದೆ. ಹಾಗೆ ನೋಡುವುದಾದರೆ ಬಾಳಿಗಾ ಕೊಂದ ನರೇಶ್ ಶೆಣೈ ಗೆ ಬಿಜೆಪಿ ವಿಐಪಿ ಪಾಸ್ ನೀಡುತ್ತೆ ಎಂದು ಕುಟುಕಿದರು.

ನರೇಂದ್ರ ಮೋದಿ ಜೊತೆ ಶೆಣೈ ಒಟ್ಟಿಗೆ ತಿರುಗಾಡುತ್ತಾರೆ. ಮೊದಲು ಬಿಜೆಪಿಗರು ಏನು ಎನ್ನುವುದು ತಿಳಿದುಕೊಳ್ಳಲಿ. ರಾಹುಲ್ ಗಾಂಧಿ ದೇಶಕ್ಕಾಗಿ ಸರ್ವಸ್ವವನ್ನು ಕೊಟ್ಟ ಕುಟುಂಬದಿಂದ ಬಂದವರು. ಸ್ವಾತಂತ್ರ್ಯ ಹೋರಾಟ ಬಿಜೆಪಿ ದೃಷ್ಟಿಯಲ್ಲಿ ಸಣ್ಣದಿರಬಹುದು. ಬಿಜೆಪಿಗರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೇ ಇರುವವರು. ಯಾಕೆಂದರೆ ಬಿಜೆಪಿಗರು ಬ್ರಿಟಿಷರ ಜೊತೆ ಕೈ ಜೋಡಿಸಿದ್ದವರು ಎಂದು ಮಾತಿನಲ್ಲೇ ಚಾಟಿ ಬೀಸಿದರು.

Comments

Leave a Reply

Your email address will not be published. Required fields are marked *