ನಮ್ಮನ್ನು ಕಟ್ಟಿ ಹಾಕಿ ಚುನಾವಣೆ ಮಾಡಿದಂತಿತ್ತು- ರಮಾನಾಥ ರೈ

ಮಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಕೊಟ್ಟ ಭರವಸೆಯನ್ನು ಈಡೇರಿಸುವ ಹಾಗೂ ಅಭಿವೃದ್ಧಿ ಕೆಲಸಗಳನ್ನು ಮಾಡುವುದೇ ಪ್ರಮುಖವಾಗಿರುತ್ತದೆ. ಚುನಾವಣೆ ಅಂದ್ರೆ ನಾವು ಕೆಲಸ ಮಾಡಿದ್ದಕ್ಕೆ ಮೌಲ್ಯಮಾಪನವಾಗಿರುತ್ತದೆ ಅಂತ ಸಚಿವ ರಮಾನಾಥ ರೈ ತಿಳಿಸಿದ್ದಾರೆ.

ಚುನಾವಣಾ ಫಲಿತಾಂಶದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಂದು ಯಾವ ಕಾರಣಕ್ಕೆ ಸೋಲಾಗಿದೆ ಎಂಬುದು ಗೊತ್ತಾಗ್ತಿಲ್ಲ. ಆದ್ರೆ ನಾವು ಇಲ್ಲಿಯವರೆಗೆ ಮಾಡುತ್ತಿದ್ದಂತಹ ಸಮಸ್ಯೆಯನ್ನೇ ಮುಂದುವರೆಸಿಕೊಂಡು ಹೋಗ್ತಾ ಇದ್ದೇವೆ. ಇವಿಎಂ ಮೆಷಿನ್ ಬಗ್ಗೆಯೂ ನಮಗೆ ಸ್ವಲ್ಪ ಸಂಶಯವಿದೆ ಅಂದ್ರು.

ಚುನಾವಣೆ ನಡೆಯುತ್ತಿದ್ದಾಗ ಕೆಲವು ಅಭ್ಯರ್ಥಿಗಳ ಮನೆ ಮೇಲೆ ಐಟಿ ದಾಳಿ ಮಾಡಲಾಗಿದೆ. ನಾನು ನನ್ನ ಜೀವಮಾನದಲ್ಲಿ ಎಷ್ಟೋ ಚುನಾವಣೆಯಲ್ಲಿ ಸ್ಫರ್ಧಿಸಿದ್ದೇನೆ. ಆದ್ರೆ ಅಭ್ಯರ್ಥಿಗಳ ಮನೆ ಮೇಲೆ ಐಟಿ ದಾಳಿ ಮಾಡುವುದನ್ನು ನೋಡಿರಲಿಲ್ಲ. ಒಟ್ಟಿನಲ್ಲಿ ಈ ಮೂಲಕ ನಮ್ಮನ್ನು ಕಟ್ಟಿ ಹಾಕಿ ಚುನಾವಣೆ ಮಾಡಿದಂತಾಗಿದೆ ಅಂತ ಅವರು ಹೇಳಿದ್ರು.

ಬಂಟ್ವಾಳದಲ್ಲಿ ಹಲವರ ಮೇಲೆ ಹಲ್ಲೆಯಾಗಿದೆ. ಹರೀಶ್ ಪೂಜಾರಿ ಎಂಬ ಹಿಂದೂ ಯುವಕನ ಮೇಲೆಯೂ ಸಂಘಪರಿವಾರದವರು ಹಲ್ಲೆ, ಹತ್ಯೆ ಮಾಡಿದ್ದಾರೆ. ಅಲ್ಲದೇ ಕೆಲವರ ಹತ್ಯೆಯಾಗಿದೆ. ಇದಕ್ಕೆ ಕಾಂಗ್ರೆಸ್ಸಿನವರು ಕಾರಣರಲ್ಲ. ಅಪಪ್ರಚಾರ ಮಾಡುತ್ತಾರೆ ಅದಕ್ಕೇನೂ ಮಾಡಕ್ಕಾಗಲ್ಲ. ಹತ್ಯೆ ಪ್ರಕರಣಗಳಲ್ಲಿ ಸಂಘಪರಿವಾರದವರು ಮತ್ತು ಎಸ್‍ಡಿಪಿಐಯವರು ಇದ್ದಾರೆ. ಆದ್ರೆ ಕಾಂಗ್ರೆಸ್ ಪಕ್ಷದ ಸದಸ್ಯರು ಯಾರು ಇಲ್ಲ. ಒಟ್ಟಿನಲ್ಲಿ ನಮ್ಮ ಕಡೆ ಬೆರಳು ತೋರಿಸುವಂತದ್ದು ಸಮಂಜಸವಲ್ಲ ಅಂತ ಹಿಂದೂಗಳ ಮೇಲಿನ ಹಲ್ಲೆ ಹಾಗೂ ಕೊಲೆಯೇ ಸೋಲಿಗೆ ಕಾರಣ ಎಂಬ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ್ರು.

ಈ ಬಾರಿಯ ಚುನಾವಣೆಯಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದ್ದ ಬಂಟ್ವಾಳ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾಂಗ್ರೆಸ್ ನ ಹಿರಿಯ ಮುಖಂಡ ರಮಾನಾಥ ರೈ ಹಿನ್ನಡೆ ಸಾಧಿಸಿದ್ದಾರೆ. ಇವರು ಬಿಜೆಪಿಯ ಯು.ರಾಜೇಶ್ ನಾಯ್ಕ್ ವಿರುದ್ಧ ಸ್ಪರ್ಧಿಸಿದ್ದರು.

Comments

Leave a Reply

Your email address will not be published. Required fields are marked *