ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಕಣ್ಣೀರಿಟ್ಟ ಸಚಿವ ರಮಾನಾಥ ರೈ!

ಮಂಗಳೂರು: ತನ್ನ ಬಗ್ಗೆ ಅವಾಚ್ಯ ಶಬ್ದಗಳಿಂದ ಬೈದರೆಂದು ಕಣ್ಣೀರು ಹಾಕಿದ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರಿಗೆ ಸಚಿವ ರಮಾನಾಥ ರೈ ಕಣ್ಣೀರಲ್ಲೇ ಉತ್ತರ ಕೊಟ್ಟಿದ್ದಾರೆ.

ಸ್ವಕ್ಷೇತ್ರ ಬಂಟ್ವಾಳದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಸಚಿವ ರೈ, ತನ್ನ ಬಗ್ಗೆ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ನಾನೇನು ಮದುವೆ ಕಾರ್ಯಕ್ರಮದಲ್ಲಿ ಪೂಜಾರಿಯವರ ಬಗ್ಗೆ ಕೆಟ್ಟ ಮಾತು ಆಡಿಲ್ಲ. ಆ ಬಗ್ಗೆ ಯಾವುದೇ ಸಾಕ್ಷ್ಯವೂ ಇಲ್ಲ. ಹೀಗಿದ್ದರೂ ವಿರೋಧ ಪಕ್ಷದವರು, ಪಕ್ಷ ಬಿಟ್ಟು ಹೋದವರು ಅಪಪ್ರಚಾರ ಮಾಡುತ್ತಿದ್ದಾರೆ. ಸ್ವತಃ ಜನಾರ್ದನ ಪೂಜಾರಿಯವರು, ಅವರ ಕುಟುಂಬಸ್ಥರು ಕರೆದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲು ರೆಡಿಯಿದ್ದೇನೆ ಅಂತಾ ಹೇಳುತ್ತಾ ಗದ್ಗದಿತರಾದ್ರು. ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಮತ್ತೆ ಕಣ್ಣೀರು!

ತನ್ನ ಹೇಳಿಕೆಯ ಮೂಲಕ ಪಕ್ಷ ತ್ಯಜಿಸಿ, ಬಿಜೆಪಿ ಸೇರ್ಪಡೆಯಾಗಿರುವ ಪೂಜಾರಿ ಆಪ್ತ ಹರಿಕೃಷ್ಣ ಬಂಟ್ವಾಳ್ ಗೆ ಈ ಮೂಲಕ ರೈ ಟಾಂಗ್ ಕೊಟ್ಟಿದ್ದಾರೆ.

ಇತ್ತೀಚೆಗಷ್ಟೇ ಮಂಗಳೂರಿನ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ವೇಳೆ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ, ತನ್ನ ತಾಯಿಯ ಹೆಸರು ಹೇಳಿ ಗದ್ಗದಿತರಾಗಿದ್ದರು. ಅರಣ್ಯ ಸಚಿವ ರಮಾನಾಥ ರೈ ಅವರು ಆಡಿದ ಅಶ್ಲೀಲ ಮಾತುಗಳನ್ನು ನೆನೆದು ಭಾಷಣದ ಆರಂಭದಲ್ಲೇ ಗಳಗಳನೇ ಅತ್ತಿದ್ದು, ತನ್ನ ವಿರುದ್ಧ ಅವಾಚ್ಯ ಶಬ್ಧ ಬಳಸಿ ನಿಂದಿಸಿದರೆಂಬ ವಿಚಾರವನ್ನು ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿಕೊಂಡು ಅತ್ತುಬಿಟ್ಟಿದ್ದರು. ಇದನ್ನೂ ಓದಿ: ಬಹಿರಂಗ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಕಣ್ಣೀರು

ಇದು ಸತ್ಯ ನ್ಯಾಯಕ್ಕಾಗಿ ಹೋರಾಡಿದ ಕೋಟಿ ಚೆನ್ನಯರ ಗರೋಡಿ. ನನ್ನ ತಾಯಿ ಚೆನ್ನಮ್ಮ. ತಾಯಿಯ ತಾಯಿ ನನ್ನ ಅಜ್ಜಿ ದೇಯಿ ಬೈದೆತಿ. ಅದೇ ರೀತಿ ಕೋಟಿ ಚೆನ್ನಯರ ತಾಯಿಯೂ ದೇಯಿ ಬೈದೆತಿ. ಹಾಗಾದ್ರೆ ರಮಾನಾಥ ರೈ ಹೇಳಿದಂತೆ ನನ್ನ ತಾಯಿ ಸೂಳೆ, ನಾನು ಸೂಳೆಯ ಮಗ ಎಂಬ ಪ್ರಶ್ನೆ ಮುಂದಿಟ್ಟು ಗದ್ಗದಿತರಾಗಿ ಕಣ್ಣೀರು ಹಾಕಿದ್ದರು.

Comments

Leave a Reply

Your email address will not be published. Required fields are marked *