ಆರ್.ವಿ ದೇಶಪಾಂಡೆ ಬೆಂಗಾವಲು ವಾಹನ ಪಲ್ಟಿ: ಇಬ್ಬರಿಗೆ ಗಾಯ

ಕಾರವಾರ: ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರ ಬೆಂಗಾವಲು ವಾಹನ ಪಲ್ಟಿಯಾದ ಘಟನೆ ಕಾರವಾರ ತಾಲೂಕಿನ ಕದ್ರಾ ಬಳಿ ಅಣಶಿ ಘಟ್ಟ ರಸ್ತೆಯಲ್ಲಿ ನಡೆದಿದ್ದು, ಇಬ್ಬರಿಗೆ ಗಾಯವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಎಆರ್ ಎಸ್‍ಐ ಪ್ರಕಾಶ್ ಮತ್ತು ಚಾಲಕ ರಾಜೇಶ್ ಗಾಯಗೊಂಡಿದ್ದಾರೆ. ಇಬ್ಬರಿಗೂ ಕೆನ್ನೆಯ ಭಾಗ ಮತ್ತು ಒಳ ಏಟುಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟ್ಟ ರಸ್ತೆಯ ಎರಡನೇ ಹೇರ್ ಪಿನ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೊಲೆರೊ ಕಾರು ರಸ್ತೆ ಬಿಟ್ಟು ಕೆಳಗೆ ಇಳಿದಿದೆ. ಪರಿಣಾಮ ಪಲ್ಟಿ ಹೊಡೆದು ಕೆಳಗಿನ ರಸ್ತೆಗೆ ಬಿದ್ದಿದೆ. ಬೊಲೆರೊ ಕಾರು ಜಖಂಗೊಂಡಿದ್ದು, ಅದರಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಾಳುಗಳನ್ನು ಕದ್ರಾ ಆಸ್ಪತ್ರೆಗೆ ಸಾಗಿಸಿ, ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಕದ್ರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ಆರ್.ವಿ. ದೇಶಪಾಂಡೆ ಅವರು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಪಾಟೀಲ್ ಅವರಿಗೆ ಸೂಚಿಸಿದರು. ಬಳಿಕ ಅಲ್ಲಿಂದ ಕಾರವಾರಕ್ಕೆ ಆಗಮಿಸಿದರು.

Comments

Leave a Reply

Your email address will not be published. Required fields are marked *