ಒಳ್ಳೆಯ ಮುಹೂರ್ತ ನೋಡಿ ಕಾಂಗ್ರೆಸ್ ಸೇರ್ಪಡೆಯಾಗ್ತೀನಿ: ಸಚಿವ ಆರ್.ಶಂಕರ್

ಮೈಸೂರು: ಕೆಜೆಪಿ ಪಕ್ಷದಲ್ಲಿಯೇ ಮುಂದುವರಿಯುತ್ತೇನೆ ಅಂತಾ ಹೇಳುತ್ತಾ ಬಂದಿದ್ದ ಅರಣ್ಯ ಸಚಿವ ಆರ್.ಶಂಕರ್ ಈಗ ತಮ್ಮ ನಿರ್ಧಾರ ಬದಲಿಸಿದ್ದಾರೆ. ಒಳ್ಳೆಯ ಮುಹೂರ್ತ ನೋಡಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇನೆ ಎಂದು ಹೇಳುವ ಮೂಲಕ ಕೈ ಸೇರ್ಪಡೆಗೆ ತಮ್ಮ ಇಂಗಿತವನ್ನು ಹೊರಹಾಕಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ. ಆದರೆ ಸಚಿವ ಸಂಪುಟದಲ್ಲಿಯೇ ಇರುತ್ತೇನೆ. ಸಂಪುಟ ವಿಸ್ತರಣೆ ಹಾಗೂ ಖಾತೆ ಬದಲಾವಣೆ ವಿಚಾರ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಮಾಧ್ಯಮಗಳು ಕೆಲವು ಗೊಂದಲಗಳನ್ನು ಸೃಷ್ಟಿಸಿದ್ದವು. ಹೀಗಾಗಿ ಅದಕ್ಕೆ ನಾನೂ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಬಿಬಿಎಂಪಿ ಉಪ ಮೇಯರ್ ರಮೀಳಾ ಉಮಾಶಂಕರ್ ನಿಧನಕ್ಕೆ ಸಂತಾಪ ಸೂಚಿಸಿದ ಅವರು, ಕೇವಲ ಒಂದು ವಾರದ ಹಿಂದೆಯಷ್ಟೇ ರಮೀಳಾ ಉಮಾಂಶಕರ್ ಅವರು ಬಿಬಿಎಂಪಿ ಉಪಮೇಯರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಹೇಳಿದ್ರು.

ಈ ಹಿಂದೆ ಸಚಿವರು ಹೇಳಿದ್ದೇನು?
ಬಿಜೆಪಿಗೆ ಬೆಂಬಲ ನೀಡುವ ಕುರಿತು ಉಡುಪಿಯಲ್ಲಿ ಸ್ಪಷ್ಟನೆ ನೀಡಿದ್ದ ಸಚಿವರು, ನಾನು ಸ್ವತಂತ್ರ ಮತ್ತು ಪಕ್ಷೇತರ ಶಾಸಕ. ಕಾಂಗ್ರೆಸ್, ಜೆಡಿಎಸ್ ಯಾಕೆ ಸೇರಬೇಕು? ಕೆಪಿಜೆಪಿ ರಾಜ್ಯಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿರುವೆ ಹಾಗೂ ಅದೇ ಪಕ್ಷದಿಂದ ಆಯ್ಕೆಯಾಗಿದ್ದೇನೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿರುವೆ. ಪಕ್ಷ ತೊರೆಯುವ ವಿಚಾರವಿಲ್ಲ ಎಂದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *