ಕೋವಿಡ್ ಮೃತರ ಕುಟುಂಬಕ್ಕೆ ರಾಜ್ಯದಿಂದ 1 ಲಕ್ಷ, ಕೇಂದ್ರದಿಂದ 50 ಸಾವಿರ ಪರಿಹಾರ: ಆರ್.ಅಶೋಕ್

– ಅರ್ಜಿ ಸಲ್ಲಿಕೆಗೆ ಈ ಕೆಳಗಿನ ದಾಖಲೆಗಳು ಅಗತ್ಯ

ಬೆಂಗಳೂರು: ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ 1 ಲಕ್ಷ ರೂ. ಹಾಗೂ ಕೇಂದ್ರ ಸರ್ಕಾರದಿಂದ 50 ಸಾವಿರ ರೂ.ಪರಿಹಾರ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೊಕ್ ತಿಳಿಸಿದರು. ಇದೇ ವೇಳೆ ಅರ್ಜಿ ಸಲ್ಲಿಕೆಗೆ ಯಾವೆಲ್ಲ ದಾಖಲೆಗಳು ಬೇಕು ಎಂಬುದನ್ನು ಸಹ ವಿವರಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೋವಿಡ್ ನಿಂದ ಮೃತಪಟ್ಚ ಕುಟುಂಬಗಳಿಗೆ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ವಿಭಾಗದಿಂದ ಪರಿಹಾರ ಕೊಡುತ್ತೇವೆ. ರಾಜ್ಯ ಸರ್ಕಾರದಿಂದ 1 ಲಕ್ಷ ರೂಪಾಯಿ, ಈ ಪರಿಹಾರ ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ. ಕೇಂದ್ರ ಸರ್ಕಾರ ಸಹ 50 ಸಾವಿರ ರೂ. ಪರಿಹಾರ ಘೋಷಿಸಿದೆ. ಇದು ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿದ ಎಲ್ಲರಿಗೂ ಸಿಗಲಿದೆ. ಬಿಪಿಎಲ್ ಕಾರ್ಡ್ ಇರುವವರಿಗೆ ಒಟ್ಟು 1.50 ಲಕ್ಷ ರೂ. ಹಣ ಬರುತ್ತದೆ. ಎಪಿಎಲ್ ಕಾರ್ಡ್ ಹೊಂದಿದವರಿಗೆ ಕೇಂದ್ರ ಸರ್ಕಾರದ 50 ಸಾವಿರ ರೂ.ಪರಿಹಾರ ಮಾತ್ರ ಬರುತ್ತದೆ ಎಂದರು. ಇದನ್ನೂ ಓದಿ:

ಅರ್ಜಿ ಸಲ್ಲಿಕೆಗೆ ಯಾವೆಲ್ಲ ದಾಖಲೆ ಬೇಕು?
ಕೋವಿಡ್ ಸೋಂಕಿತರ ವರದಿಯ ಬಿ.ಯು ನಂಬರ್ ಬೇಕು. ಮೃತ ವ್ಯಕ್ತಿಯ ಮರಣ ಪತ್ರ, ಆಧಾರ್ ಪ್ರತಿ, ಮೃತ ವ್ಯಕ್ತಿಯ ಬಿಪಿಎಲ್ ಕಾರ್ಡ್, ಗುರುತಿನ ಚೀಟಿ, ಅರ್ಜಿದಾರರ ಬ್ಯಾಂಕ್ ಅಕೌಂಟ್ ವಿವರ ಕೊಡಬೇಕು. ಅರ್ಜಿದಾರರ ಸ್ವಯಂ ಘೋಷಣಾ ಫಾರಂ-2 ನೀಡಬೇಕು, ಕುಟುಂಬದ ಉಳಿದವರಿಗೆ ಕೊಡಬೇಕಾದರೆ ಫಾರಂ-3 ಅರ್ಜಿ ಕೊಡಬೇಕು. ಅರ್ಜಿಗಳನ್ನು ಜಿಲ್ಲಾಧಿಕಾರಿ, ತಹಶಿಲ್ದಾರರ್ ಗೆ ಸಲ್ಲಿಸಬಹುದು ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಪರಿಹಾರದ ಹಣ ಆರ್‍ಟಿಜಿಎಸ್ ಮೂಲಕ ಅಕೌಂಟ್ ಗೆ ಹೋಗುತ್ತದೆ. ಈ ಕಮಿಟಿಯಲ್ಲಿ ಜಿಲ್ಲಾಧಿಕಾರಿ, ವೈದ್ಯಾಧಿಕಾರಿ, ಸದಸ್ಯ ಕಾರ್ಯದರ್ಶಿ ಇರುತ್ತಾರೆ. ಬೆಂಗಳೂರು ಪಾಲಿಕೆಯಲ್ಲಿ ವಲಯ ಜಂಟಿ ಆಯುಕ್ತರು ಇರುತ್ತಾರೆ. ಆರೋಗ್ಯ ಇಲಾಖೆಯಿಂದ ಪರಿಶೀಲಿಸಿ ನಿರ್ಧಾರ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.

ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ವ್ಯತ್ಯಾಸದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಅವರ ಆರೋಪ ಅಷ್ಟೇ, ಯಾರೆಲ್ಲ ಸಾವನ್ನಪ್ಪಿದ್ದಾರೆ ಅವರ ಮಾಹಿತಿ ಇದೆ, ಡಾಕ್ಟರ್ ಸರ್ಟಿಫಿಕೇಟ್ ಸಹ ಇರುತ್ತೆ. ತಹಶೀಲ್ದಾರ್ ಹಾಗೂ ರೆವಿನ್ಯೂ ಅಧಿಕಾರಿಗಳ ಬಳಿ ವರದಿ ಇರುತ್ತದೆ. ಬೋಗಸ್ ಆಗಲು ಅವಕಾಶ ಇರಲ್ಲ. ಆಸ್ಪತ್ರೆಯಿಂದ ಕೋಡ್ ನಂಬರ್ ಇರುತ್ತೆ. ಕಾಂಗ್ರೆಸ್ ಗೆ ಆರೋಪ ಮಾಡುವ ಚಟ ಇದೆ ಎಂದು ತಿರುಗೇಟು ನೀಡಿದರು.

ಮತಾಂತರ ಮಾಡುವವರೆಲ್ಲ ಅವರೆಲ್ಲ ದೇಶ ದ್ರೋಹಿಗಳು, ನೆಲದ ಸಂಸ್ಕೃತಿ ಹಾಳು ಮಾಡಲು ಮತಾಂತರ ಮಾಡುತ್ತಿದ್ದಾರೆ. ಮತಾಂತರ ನಿಷೇಧ ಕಾಯ್ದೆ ತರಬೇಕು. ಯಾವುದೋ ದೇಶದ ದುಡ್ಡನ್ನು ತಂದು ಹೀಗೆ ಮಾಡುತ್ತಿದ್ದಾರೆ. ಸಿಎಂ ಹಾಗೂ ಗೃಹ ಇಲಾಖೆ ಜೊತೆಗೆ ಮಾತಾಡುತ್ತೇನೆ. ಸೂಕ್ತ ಕಾಯ್ದೆ ತರಬೇಕು. ನಮ್ಮ ಸರ್ಕಾರ ಇರೋದಕ್ಕೆ ಇದೆಲ್ಲ ಆಚೆ ಬರುತ್ತಿದೆ ಎಂದರು.

Comments

Leave a Reply

Your email address will not be published. Required fields are marked *