ಬೆಂಗಳೂರು: ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳುವ ದುರ್ಗತಿ ನಮಗೆ ಬಂದಿಲ್ಲ. ಚುನಾವಣಾ ಪ್ರಚಾರದಲ್ಲಿ ಮಂಡ್ಯದ ಜನತೆ ನನ್ನ ಪರವಾಗಿ ಇದ್ದಾರೆ ಎಂದು ಹೇಳುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್, ಇಂತಹ ಕೆಳಮಟ್ಟದ ಪ್ರಚಾರಕ್ಕೆ ಇಳಿಯಬಾರದು ಎಂದು ಸಚಿವ ಸಿ.ಎಸ್ ಪುಟ್ಟರಾಜು ಕಿಡಿಕಾರಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಳೆದ 35 ವರ್ಷಗಳಿಂದ ನಾವು ಮತ್ತು ದೇವೇಗೌಡರ ಕುಟುಂಬ ರಾಜಕಾರಣದಲ್ಲಿದ್ದೇವೆ. ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುತ್ತಾ ಬಂದಿದ್ದೇವೆ. ಸುಮಲತಾ ಪ್ರಥಮ ಬಾರಿಗೆ ಸ್ಪರ್ಧೆ ಮಾಡಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಅಂತಹವರು ನಮಗೆ ಅರ್ಜಿ ಹೇಗೆ ಹಾಕಬೇಕು ಎಂಬುದನ್ನು ಕಲಿಸಿಕೊಡಲು ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ರು.

ಕಳೆದ 35 ವರ್ಷಗಳಿಂದಲೂ ಚುನಾವಣೆಗಳನ್ನು ಮಾಡಿಕೊಂಡು ಬಂದಿದ್ದೇನೆ. ನನ್ನ ನೇತೃತ್ವದಲ್ಲಿಯೇ ಹಲವರ ನಾಮಿನೇಷನ್ ಮಾಡಿಸಿದ್ದೇನೆ. ನಿಖಿಲ್ ಕುಮಾರಸ್ವಾಮಿ ನಾಮಿನೇಷನ್ ಸಹ ನನ್ನ ಸಮ್ಮುಖದಲ್ಲಿ ನಡೆದಿದೆ. ಇಷ್ಟು ವರ್ಷ ಯಾವುದೇ ಲೋಪ ದೋಷಗಳು ಕಂಡು ಬಂದಿಲ್ಲ. ಇಂದು ಸುಮಲತಾರೇ ಸ್ಪರ್ಧೆ ಮಾಡಿದಾಗ ಇಂತಹ ಲೋಪ ದೋಷಗಳು ಆಗುತ್ತಾ ಎಂದು ಪ್ರಶ್ನಿಸಿದರು.
ಮಂಡ್ಯ ಜಿಲ್ಲಾಧಿಕಾರಿಯನ್ನು ಹಿಂದಿನ ಅಂಬರೀಶ್ ಅವರ ಕಾಂಗ್ರೆಸ್ ಸರ್ಕಾರವೇ ನೇಮಕ ಮಾಡಿತ್ತು. ಜಿಲ್ಲಾಧಿಕಾರಿಯನ್ನು ಕುಮಾರಸ್ವಾಮಿ ಸರ್ಕಾರ ನೇಮಕ ಮಾಡಿಲ್ಲ. ಚುನಾವಣಾ ಅಧಿಕಾರಿಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತವೆ. ಕಾನೂನಿನಲ್ಲಿ ತಪ್ಪು ಮಾಡಿದವರ ವಿರುದ್ಧ ದೂರು ಸಲ್ಲಿಸಲು ಹಲವಾರು ಅವಕಾಶಗಳನ್ನು ನೀಡಲಾಗಿದೆ. ಸುದ್ದಿಗೋಷ್ಠಿ ನಡೆಸುವ ಮೂಲಕ ಪಕ್ಷೇತರ ಅಭ್ಯರ್ಥಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

Leave a Reply