ನಮೋ ಅಂದ್ರೆ ನರೇಂದ್ರ ಮೋದಿಯಲ್ಲ, ನಮಗೆ ಮೋಸ ಮಾಡಿದವರು ಎಂದರ್ಥ: ಪ್ರಿಯಾಂಕ್ ಖರ್ಗೆ

– ಉಮೇಶ್ ಜಾದವ್ ಬಿಜೆಪಿ ಸೇರಿದ್ದಕ್ಕೆ ಕಾರಣ ಕೊಟ್ಟ ಸಚಿವರು

ಕಲಬುರಗಿ: ನಮೋ ಅಂದ್ರೆ ನರೇಂದ್ರ ಮೋದಿಯಲ್ಲ, ನಮಗೆ ಮೋಸ ಮಾಡಿದವರು ಎಂದರ್ಥ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಜಿಲ್ಲೆಯ ಚಿಂಚೋಳಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಬಿಜೆಪಿ ಆಪರೇಶನ್ ಕಮಲಕ್ಕೆ ಕೈಹಾಕಿತ್ತು. ಅದಕ್ಕೆ ಚೋರ್ ಗುರು ಪ್ರಧಾನಿ ಮೋದಿ ಹಾಗೂ ಚಾಂಡಾಳ್ ಶಿಷ್ಯ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಾಥ್ ನೀಡಿದ್ದರು. ಮೋದಿ ಚೌಕಿದಾರ್ ನಹೀ, ಚೋರ್ ಹೈ ಚೋರ್ (ಪ್ರಧಾನಿ ಮೋದಿ ಕಾವಲುಗಾರನಲ್ಲ, ಆತ ಒಬ್ಬ ಕಳ್ಳ) ಎಂದು ಆರೋಪಿಸಿದರು.

ಉದ್ಯಮಿಗಳಾದ ಲಲಿತ್ ಮೋದಿ, ನೀರವ್ ಮೋದಿ, ವಿಜಯ್ ಮಲ್ಯ ಸೇರಿದಂತೆ ಅನೇಕರು ಸಾಲ ಮಾಡಿ ದೇಶವನ್ನೇ ಬಿಟ್ಟು ಹೋದರು. ಅವರ ವಿರುದ್ಧ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದರು.

ಹೈದರಾಬಾದ್ ಕರ್ನಾಟಕ ವಿಶೇಷ ಮಿಸಲಾತಿ 371(ಜೆ) ಮಸೂದೆಯನ್ನು ಬಿಜೆಪಿ ತಿರಸ್ಕರಿಸಿತ್ತು. ಆದರೆ ಯುಪಿಎ ಸರ್ಕಾರ ಮಸೂದೆಯನ್ನು ಜಾರಿಗೆ ತಂದು ರಾಜ್ಯದ ಅನೇಕರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದ ಅವರು, ನಿಮ್ಮ ಹಿಂದೆ ನಾನಿರುತ್ತೇನೆ. ಜಿಲ್ಲೆಗೆ ಬೇಕಾದ ಕೆಲಸವನ್ನು ನಾನು ಮಾಡುತ್ತೇನೆ. ಸಮಾಜ ಕಲ್ಯಾಣ ಇಲಾಖೆಯಿಂದ ಎಲ್ಲಾ ಅನುಕೂಲ ಮಾಡಿಕೊಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಶ್ವಾಸನೆ ನೀಡಿದರು.

ಪಬ್ಲಿಕ್ ಟಿವಿ ಪ್ರಸಾರ ಮಾಡಿದ್ದ ಚಿಂಚೋಳಿಯ ಗ್ಯಾಂಬ್ಲಿಂಗ್ ವರದಿ ಪ್ರಸ್ತಾಪಿಸಿ ಶಾಸಕ ಉಮೇಶ್ ಜಾಧವ್ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟರು. ಚಿಂಚೋಳಿ ತಾಲೂಕಿನ ಹೆಸರು ರಾಷ್ಟ್ರಮಟ್ಟದಲ್ಲಿತ್ತು. ಆದರೆ ಉಮೇಶ್ ಜಾಧವ್ ಅವರು ಇಸ್ಪೀಟ್ ಅಡ್ಡೆ ನಡೆಸುತ್ತಿದ್ದರು. ಇದರಿಂದಾಗಿ ಕ್ಷೇತ್ರದಲ್ಲಿ ದುಡ್ಡಿನ ಜಾತ್ರೆ ನಡೆಯುತ್ತಿತ್ತು. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಅರ್ಧಗಂಟೆ ಸುದ್ದಿ ಪ್ರಸಾರವಾಗಿತ್ತು. ಆಗ ಆ ದುಡ್ಡಿನ ಖಜಾನೆಗೆ ಬ್ರೇಕ್ ಬಿತ್ತು. ಹೀಗಾಗಿ ಉಮೇಶ್ ಜಾಧವ್ ಅವರು ಬಿಜೆಪಿಗೆ ಹೋಗಿರಬಹುದು ಎಂದು ಗಂಭೀರವಾಗಿ ಆರೋಪಿಸಿದರು.

ಈ ಸಮಾವೇಶದಲ್ಲಿ ಸೇರಿರುವ ಜನರನ್ನು ನೋಡಿದರೆ ಚಿಂಚೋಳಿ ಕ್ಷೇತ್ರವು ಕಾಂಗ್ರೆಸ್ ಭದ್ರ ಕೋಟೆ ಎಂಬುದು ಸಾಬೀತಾಗುತ್ತದೆ ಎಂದ ಸಚಿವರು, ಅವರಿಗೆ ಆ ಒಂದು ತತ್ವವಿದೆ, ಆದರೆ ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂದು ಹೆಸರು ಪ್ರಸ್ತಾಪಿಸದೇ ಉಮೇಶ್ ಜಾಧವ್ ವಿರುದ್ಧ ವಾಗ್ದಾಳಿ ನಡೆಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *