ಸರ್ಕಾರ ಹೊರಡಿಸಿರುವ ಮೊದಲ ಸುತ್ತೋಲೆ- ಯಾರೂ ಗಡಿಬಿಡಿ ಮಾಡ್ಬೇಡಿ: ಸಚಿವ ಮಧ್ವರಾಜ್

ಉಡುಪಿ: ಅಲ್ಪಸಂಖ್ಯಾತ ಮುಗ್ಧರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಸರ್ಕಾರ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಸುತ್ತೋಲೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ವಿಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದಿದೆ. ರಾಜ್ಯ ಸರ್ಕಾರ ಹಿಂದೂ ವಿರೋಧಿತನವನ್ನು ಮತ್ತೆ ಪ್ರದರ್ಶನ ಮಾಡುತ್ತಿದೆ ಎಂದು ಕಿಡಿಕಾರುತ್ತಿದೆ.

ಈ ಬಗ್ಗೆ ಉಡುಪಿಯ ಮಲ್ಪೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವ ಪ್ರಮೋದ್ ಮಧ್ವರಾಜ್, ಮುಗ್ಧ ಹಿಂದೂಗಳ ಮೇಲಿನ ಕೇಸ್ ವಾಪಸ್ ಪಡೆಯಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ. ವಿಪಕ್ಷಗಳು ಹಾಗೂ ರಾಜ್ಯದ ಜನರು ಗೊಂದಲ ಮಾಡಿಕೊಳ್ಳುವುದು ಬೇಡ ಅಂತ ಹೇಳಿದರು.

ನೂರು ಮಂದಿ ಅಪರಾಧಿಗಳನ್ನು ಬಿಟ್ಟರೂ ತೊಂದ್ರೆ ಇಲ್ಲ. ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು. ಖಂಡಿತವಾಗಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದನೆ ಮಾಡುತ್ತದೆ. ಪೊಲೀಸ್ ಇಲಾಖೆ, ಸರ್ಕಾರ ತನ್ನ ವಿವೇಚನೆಗೆ ಅನುಗುಣವಾಗಿ ಸುತ್ತೋಲೆ ಹೊರಡಿಸಿದೆ. ಪ್ರಕರಣಗಳಲ್ಲಿ ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಮುಗ್ಧರಾಗಿದ್ದರೆ ಅವರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಬೇಕು. ಈ ಬಗ್ಗೆ ಸಿಎಂಗೆ ಒತ್ತಾಯಿಸುವುದಾಗಿ ಹೇಳಿದರು.

ಮುಗ್ಧ ಹಿಂದೂಗಳ ಮೇಲಿನ ಕೇಸನ್ನು ಹಿಂಪಡೆಯುವ ಸುತ್ತೋಲೆ ಬರಬಹುದು, ಇದು ಮೊದಲ ಸುತ್ತೋಲೆ ಯಾರೂ ಗಡಿಬಿಡಿ ಮಾಡಬೇಡಿ. ಈ ವಿಚಾರದಲ್ಲಿ ಸರ್ಕಾರ ಬೇಧ ಭಾವ ಮಾಡಬಾರದು. ಅಲ್ಪಸಂಖ್ಯಾತರಿಂದ ಸರ್ಕಾರಕ್ಕೆ, ಪೊಲೀಸ್ ಇಲಾಖೆಗೆ ಮನವಿ ಬಂದಿರಬಹುದು. ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಿಗೆ ಸುತ್ತೋಲೆ ಬಂದಿರುತ್ತದೆ. ಹಿಂದೂಗಳೂ ಸರ್ಕಾರವನ್ನು ಮನವಿ ಮಾಡಬೇಕು. ಈ ಬಗ್ಗೆ ನಾನೇ ಖುದ್ದಾಗಿ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಇಲಾಖೆ ಕಳುಹಿಸಿರುವ ಜಿಲ್ಲೆಗಳ ಪಟ್ಟಿಯಲ್ಲಿ ಉಡುಪಿ ಕೂಡಾ ಇದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *