ವಸತಿ ಶಾಲೆಗೆ ದಿಢೀರ್ ಭೇಟಿ- ವಿದ್ಯಾರ್ಥಿಗಳೊಂದಿಗೆ ಭೋಜನ ಸವಿದ ಸಚಿವರು

– ವಸತಿ ಶಾಲೆಯಲ್ಲಿ  ವಾಸ್ತವ್ಯ ಹೂಡಿದ ಪ್ರಭು ಚವ್ಹಾಣ್

ಯಾದಗಿರಿ: ಪಶುಸಂಗೋಪನೆ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಪ್ರಭು ಚವ್ಹಾಣ್ ಅವರು ದಿಢೀರ್ ಭೇಟಿ ನೀಡಿ ಮೂಲಕ ಮತ್ತೊಮ್ಮೆ ಅಧಿಕಾರಿಗಳನ್ನ ಬೆಚ್ಚಿ ಬೀಳಿಸಿದ್ದಾರೆ. ಈ ಮೂಲಕ ಕೆಲಸ ಮಾಡದಿದ್ದರೆ ಉಳಿಗಾಲವಿಲ್ಲ ಎನ್ನುವ ಸಂದೇಶವನ್ನು ಅಧಿಕಾರಿಗಳಿಗೆ ನೀಡಿದ್ದಾರೆ.

ಕೆಲ ದಿನಗಳ ಗ್ಯಾಪ್ ಬಳಿಕ ಯಾದಗಿರಿಗೆ ಆಗಮಿಸಿರುವ ಸಚಿವ ಪ್ರಭು ಚವ್ಹಾಣ್, ದಿಢೀರ್ ಭೇಟಿಯ ಸರಣಿ ಮುಂದುವರಿಸಿದ್ದಾರೆ. ಈ ಬಾರಿ ಯಾದಗಿರಿ ತಾಲೂಕಿನ ಬಂದಳ್ಳಿ ಬಳಿಯ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನಿಗದಿಯಂತೆ ಬೀದರ್ ನಿಂದ ಯಾದಗಿರಿಗೆ ರಾತ್ರಿ ಆಗಮಿಸಿದ ಸಚಿವರು, ನೇರವಾಗಿ ಹಾಸ್ಟೆಲ್‍ಗೆ ಭೇಟಿ ನೀಡಿದರು.

ಸಚಿವರು ಆಗಮಿಸ್ತಿದ್ದಂತೆ ಅವ್ಯವಸ್ಥೆ ಆಗರವೇ ಅವರನ್ನ ಸ್ವಾಗತಿಸಿತ್ತು. ಹಾಸ್ಟೆಲ್ ಆವರಣದಲ್ಲೇ ಹಾಕಿದ್ದ ಕಸದ ರಾಶಿ ನೋಡಿ ಗರಂ ಆದ ಸಚಿವರು ಸ್ವಚ್ಛತೆ ಬಗ್ಗೆ ಗಮನ ಹರಿಸುವಂತೆ ಸಲಹೆ ನೀಡಿದರು. ನಂತರ ಭೋಜನಾಲಯಕ್ಕೆ ಭೇಟಿ ನೀಡಿ, ಊಟದ ಬಗ್ಗೆ ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿದರು. ಇದೇ ವೇಳೆ ವಿದ್ಯಾರ್ಥಿಗಳ ಜೊತೆ ಕುಳಿತು ಪ್ರಾರ್ಥನೆ ಮಾಡಿ, ಅಲ್ಲೇ ಭೋಜನ ಸವಿದರು.

ಈ ಹಿಂದೆ ದಿಢೀರ್ ಭೇಟಿ ನೀಡಿದ್ದ ಸಚಿವರು ಈಗ ದಿಢೀರ್ ವಾಸ್ತವ್ಯ ಹುಡುವುದಕ್ಕೆ ಪ್ಲ್ಯಾನ್ ಮಾಡಿದರು. ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಹಾಸ್ಟೆಲ್‍ನಲ್ಲಿ ವಾಸ್ತವ್ಯ ಹೂಡುವ ಹೊಸ ಪರಿಪಾಠಕ್ಕೆ ನಾಂದಿ ಹಾಡಿದ್ದಾರೆ. ಈ ಮೂಲಕ ಸಚಿವ ಶ್ರೀರಾಮುಲು, ಸಚಿವ ಸುರೇಶ್ ಕುಮಾರ್ ಹಾದಿಯನ್ನು ಪ್ರಭು ಚವ್ಹಾಣ್ ತುಳಿದಿದ್ದಾರೆ. ಹೀಗೆ ದಿಢೀರ್ ಭೇಟಿಯಿಂದ ಸಮಸ್ಯೆಯನ್ನ ಸಂಪೂರ್ಣವಾಗಿ ನಿವಾರಿಸುದಕ್ಕೆ ಆಗದಿದ್ದರು ಶೇ.50ರಷ್ಟು ಆದರೂ ಸಮಸ್ಯೆಗೆ ಪರಿಹಾರ ಸಿಗಲಿದೆ ಎನ್ನುವುದು ಸಚಿವರ ವಾದವಾಗಿದೆ.

Comments

Leave a Reply

Your email address will not be published. Required fields are marked *