ವಿಚಿತ್ರ ಹರಕೆ ತೀರಿಸಿದ ಸಚಿವ ಲಕ್ಷ್ಮಣ ಸವದಿ ಅಭಿಮಾನಿ

ಚಿಕ್ಕೋಡಿ/ಬೆಳಗಾವಿ: ಸಿನಿಮಾ ನಟರ ಕೆಲ ಅಭಿಮಾನಿಗಳ ರೀತಿ ಸಚಿವ ಲಕ್ಷ್ಮಣ ಸವದಿ ಅವರ ಅಭಿಮಾನಿ ಸಹ ವಿಚಿತ್ರ ಹರಕೆಯನ್ನು ತೀರಿಸಿದ್ದಾರೆ.

ಲಕ್ಷ್ಮಣ್ ಸವದಿ ಅವರು ಸಚಿವರಾಗುವವರೆಗೆ ತಲೆಗೆ ಕಟ್ಟಿದ ಬಟ್ಟೆಯನ್ನು ಬಿಚ್ಚುವದಿಲ್ಲ ಎಂದು ಅಭಿಮಾನಿಯೊಬ್ಬರು ಹರಕೆ ಹೊತ್ತುಕೊಂಡಿದ್ದರು. ಮೊನ್ನೆಯಷ್ಟೇ ಇತರ ಸಚಿವರೊಂದಿಗೆ ಲಕ್ಷ್ಮಣ್ ಸವದಿ ಸಹ ಪ್ರಮಾಣವಚನ ಸ್ವೀಕರಿಸಿದ್ದು, ಹೀಗಾಗಿ ಹರಕೆ ತೀರಿದ್ದರಿಂದ ಇಂದು ಅಭಿಮಾನಿ ಬಟ್ಟೆ ಬಿಚ್ಚಿ ಸಚಿವರಿಗೆ ಶುಭಾಶಯ ಕೋರಿದ್ದಾನೆ.

ಅಥಣಿ ಪಟ್ಟಣದ ವ್ಯಾಪಾರಿಯಾಗಿರುವ ರಾಮಗೌಡ ಪಾಟೀಲ್ ಲಕ್ಷ್ಮಣ ಸವದಿ ಅವರ ಅಭಿಮಾನಿಯಾಗಿದ್ದು, ಕಳೆದ ಮೂರು ವರ್ಷದಿಂದ ತಲೆಗೆ ಬಟ್ಟೆ ಕಟ್ಟಿ ತಿರುಗುತ್ತಿದ್ದರು. ಇದೀಗ ಸಚಿವರಾಗಿದ್ದರಿಂದ ಸ್ವತಃ ಲಕ್ಷ್ಮಣ ಸವದಿ ಅವರೇ ಅಭಿಮಾನಿಯ ತಲೆಗೆ ಕಟ್ಟಿದ್ದ ಬಟ್ಟೆ ಬಿಚ್ಚಿದರು. ಇದೇ ವೇಳೆ ಸಚಿವರು ಅಭಿಮಾನಿಗೆ ಧನ್ಯವಾದ ತಿಳಿಸಿದರು. ಆಗ ಭಾವುಕನಾಗಿ ಲಕ್ಷ್ಮಣ ಸವದಿಯವರನ್ನು ಅಭಿಮಾನಿ ಅಪ್ಪಿಕೊಂಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಗೆದ್ದ ಶಾಸಕರಿಗೇ ಸಚಿವ ಸ್ಥಾನ ಸಿಕ್ಕಿಲ್ಲ. ಆದರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಸಹ ಲಕ್ಷ್ಮಣ ಸವದಿ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಲಕ್ಷ್ಮಣ ಸವದಿ ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಮಹೇಶ್ ಕಮಟಳ್ಳಿ ವಿರುದ್ಧ ಸೋಲುಂಡಿದ್ದು, ಇದೀಗ ಮಹೇಶ್ ಕಮಟಳ್ಳಿ ಸಹ ಶಾಸಕ ಸ್ಥಾನದಿಂದ ಅನರ್ಹರಾಗಿದ್ದಾರೆ. ಲಿಂಗಾಯತ (ಗಾಣಿಗ) ಸಮುದಾಯಕ್ಕೆ ಸೇರಿದ ಲಕ್ಷ್ಮಣ ಸವದಿ ಯಡಿಯೂರಪ್ಪ ಆಪ್ತ ಬಗಳದಲ್ಲಿ ಗುರುತಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *