ಡ್ರಗ್ಸ್ ದಂಧೆ ಜೊತೆಗೆ ಕುಹಕ ಮಾಡುವವರನ್ನೂ ಮಟ್ಟ ಹಾಕುತ್ತೇವೆ: ಕೋಟಾ

ಮಡಿಕೇರಿ: ರಾಜ್ಯದಲ್ಲಿ ಡ್ರಗ್ಸ್ ದಂಧೆ ಜೊತೆಗೆ ನಮ್ಮನ್ನು ಕುಹಕ ಮಾಡುವವರನ್ನು ಸಹ ಮಟ್ಟ ಹಾಕುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಮಡಿಕೇರಿಯಲ್ಲಿ ಕೋವಿಡ್ ನಿರ್ವಹಣೆ ಮತ್ತು ನಿಫಾ ವೈರಸ್ ತಡೆಗೆ ಸಂಬಂಧಿಸಿದಂತೆ ನಡೆದ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ವಿಷಯದಲ್ಲಿ ಬಿಜೆಪಿಯವರನ್ನು ಮೊದಲು ಪರೀಕ್ಷಿಸಬೇಕು ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ಸಾಮಾಜಿಕ ಜವಾಬ್ದಾರಿ ವಿಷಯಗಳಿಗೆ ಯಾರೋ ಕುಹಕದ ಮಾತುಗಳನ್ನಾಡಿದರೆ ಅದಕ್ಕೆ ಉತ್ತರಿಸುವ ಅಗತ್ಯವಿಲ್ಲ ಎಂದರು.

ಡ್ರಗ್ಸ್ ಪ್ರಕರಣಗಳು ಬೆಳಕಿಗೆ ಬಂದಾಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಗೃಹ ಮಂತ್ರಿಯಾಗಿದ್ದರು. ಆಗ ಅವರೇ ಕಠಿಣ ನಿರ್ಧಾರ ತೆಗೆದುಕೊಂಡಿದ್ದರು. ಈಗ ಸಿಎಂ ಆಗಿದ್ದು, ಯಾವುದೇ ಕಾರಣಕ್ಕೂ ಡ್ರಗ್ಸ್ ದಂಧೆಯನ್ನು ಮಟ್ಟ ಹಾಕದೇ ಬಿಡುವುದಿಲ್ಲ ಎಂದರು. ಇದನ್ನೂ ಓದಿ: ಲಾರಿ, ಬೈಕ್ ಡಿಕ್ಕಿ – ಬಾಗಿನ ಕೊಟ್ಟು ಬರ್ತಿದ್ದ ತಂದೆ, ಮಗಳ ಸಾವು

ನಟಿ, ನಿರೂಪಕಿ ಅನುಶ್ರಿ ಅವರ ವಿಷಯದಲ್ಲಿ ಸಾಫ್ಟ್ ಕಾರ್ನರ್ ತೋರಿಸಲಾಗುತ್ತಿದೆಯಾ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಯಾರಿಗೂ ಯಾವುದೇ ಕಾರಣಕ್ಕೂ ಸಾಫ್ಟ್ ಕಾರ್ನರ್ ತೋರಿಸುವ ಪ್ರಶ್ನೆಯೇ ಇಲ್ಲ. ಈ ಕುರಿತು ಈಗಾಗಲೇ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ 0.5ಗೆ ಬಂದಿದೆ. ಹೀಗಾಗಿ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ತೆರವಿಗೆ ಸರ್ಕಾರ ಚಿಂತಿಸಿದೆ. ಇಂದು ಸಂಜೆ ಒಳಗೆ ಕಂದಾಯ ಸಚಿವರು ಈ ಕುರಿತು ಆದೇಶ ಹೊರಡಿಸಬಹುದು. ಬಳಿಕ ವೀಕೆಂಡ್ ಕರ್ಫ್ಯೂ ತೆರವು ಮಾಡಲು ನಾವು ನಿರ್ಧಾರ ಮಾಡುತ್ತೇವೆ. ಕೇರಳದಲ್ಲಿ ನಿಫಾ ವೈರಸ್ ಆತಂಕ ಹಿನ್ನೆಲೆ ಗಡಿಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ.83ರಷ್ಟು ವ್ಯಾಕ್ಸಿನ್ ಆಗಿದೆ. ಮುಂದಿನ 15 ದಿನಗಳಲ್ಲಿ ಶೇ.100ರಷ್ಟು ವಾಕ್ಸಿನ್ ಮಾಡಲಾಗುವುದು.

Comments

Leave a Reply

Your email address will not be published. Required fields are marked *