ಪಬ್ಲಿಕ್ ಟಿವಿ ಬಿಗ್ ಇಂಪ್ಯಾಕ್ಟ್- ವಿದೇಶ ಪ್ರವಾಸ ರದ್ದು ಮಾಡ್ತೀನಿ ಎಂದ ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ರಾಜ್ಯದ ಹಲವು ಭಾಗದಲ್ಲಿ ಪ್ರವಾಹದ ರೌದ್ರನರ್ತನಕ್ಕೆ ಜನರ ಜೀವನ ಅಸ್ತವ್ಯಸ್ಥಗೊಂಡಿದೆ. ಪ್ರವಾಹ ಇಳಿದರೂ ಜನರ ಸಂಕಷ್ಟಕ್ಕೆ ಮಾತ್ರ ಇನ್ನೂ ಪರಿಹಾರ ಸಿಕ್ಕಿಲ್ಲ. ಹೀಗಿರುವಾಗ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ವಿದೇಶ ಪ್ರವಾಸಕ್ಕೆ ಹೊರಟಿದ್ದು ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಸಚಿವರು ವಿದೇಶ ಪ್ರವಾಸ ರದ್ದು ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜಗದೀಶ್ ಶೆಟ್ಟರ್, ಮಂತ್ರಿಗಳಿಗೆ ಚೀನಾದಿಂದ ಆಹ್ವಾನ ಬಂದ ಹಿನ್ನೆಲೆ ಕೈಗಾರಿಕಾ ಇಲಾಖೆಯಿಂದ ಅಧಿಕಾರಿಗಳು ಈ ಪ್ರವಾಸಕ್ಕೆ ಪ್ಲಾನ್ ಮಾಡಿದ್ದರು. ಆದರೆ ನಾನು ಹೋಗುವ ಬಗ್ಗೆ ನಿರ್ಧರಿಸಿರಲಿಲ್ಲ. ಕೈಗಾರಿಕಾ ಸಚಿವರು ವಿದೇಶ ಪ್ರವಾಸ ಹೋಗೋದು ಸಹಜ. ಆದ್ರೆ ರಾಜ್ಯದಲ್ಲಿ ಸಂಕಷ್ಟದ ಪರಿಸ್ಥಿತಿ ಇರುವ ಕಾರಣಕ್ಕೆ ಈ ಪ್ರವಾಸವನ್ನು ನಾನು ರದ್ದು ಮಾಡುತ್ತೇನೆ. ವಿದೇಶದಲ್ಲಿರುವ ಭಾರತೀಯರು, ಕನ್ನಡಿಗರು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿಕೊಳ್ಳಲು ನಿರ್ಧರಿಸಿದ್ದರು. ಹೀಗಾಗಿ ಅವರ ಬಳಿ ಸಮಾಲೋಚನೆ ನಡೆಸಿ ರಾಜ್ಯದ ಸ್ಥಿತಿ ಬಗ್ಗೆ ತಿಳಿಸಿ ಪ್ರವಾಸಕ್ಕೆ ಬರಲು ಸಾಧ್ಯವಾಗಲ್ಲವೆಂದು ತಿಳಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಪ್ರವಾಸದ ಕುರಿತು ಸಿದ್ಧವಾಗಿದ್ದ ದಾಖಲೆಗಳಲ್ಲಿ ಬಂಡವಾಳ ಹೂಡಿಕೆ ವಿಚಾರವಾಗಿ ಯಾಕೆ ಉಲ್ಲೇಖವಿಲ್ಲ ಎಂದು ಪ್ರಶ್ನಿಸಿದಾಗ, ನಮ್ಮ ಕಚೇರಿಗೆ ಬನ್ನಿ ಅಲ್ಲಿ ಚೀನಾದವರ ಆಹ್ವಾನ, ಅಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ದಾಖಲೆಗಳಿವೆ. ಹಾಗೆಯೇ ಇತ್ತೀಚೆಗೆ ಚೀನಾ ಡೆಲಿಗೇಷನ್ ಬೆಂಗಳೂರಿಗೆ ಬಂದಿತ್ತು. ಇಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿಸಿತ್ತು. ಅಮೆರಿಕ ಹಾಗೂ ಚೀನಾ ಬಾಂಧವ್ಯ ಹದಗೆಟ್ಟಿರುವ ಹಿನ್ನೆಲೆ ಯುಎಸ್‍ನಲ್ಲಿ ಚೀನಾ ಹೂಡಿಕೆದಾರರ ಮೇಲೆ ಬಹಳಷ್ಟು ನಿರ್ಬಂಧಗಳನ್ನು ಹೇರಲಾಗುತ್ತಿದೆ. ಹೀಗಾಗಿ ಚೀನಾ ಹೂಡಿಕೆದಾರರು ಕರ್ನಾಟಕದಲ್ಲಿ ಬಂಡವಾಳ ಹೂಡಲು ಆಸಕ್ತರಾಗಿದ್ದಾರೆ. ಹೀಗಾಗಿ ಅಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಕಾನ್ಫರೆನ್ಸ್‍ಗೆ ಚೀನಾ ಕೈಗಾರಿಕಾ ಇಲಾಖೆ ರಾಜ್ಯಕ್ಕೆ ಆಹ್ವಾನ ಕಳುಹಿಸಿತ್ತು. ಹೀಗಾಗಿ ವಿದೇಶ ಪ್ರವಾಸಕ್ಕೆ ಹೊರಟಿದ್ದೆವು. ಚೀನಾವನ್ನು ಈಗಾಗಲೇ ನಾನು ನೋಡಿದ್ದೀನಿ. ನನಗೆ ವಿದೇಶ ಪ್ರವಾಸ ಮಾಡುವ ಚಟವಿಲ್ಲ ಎಂದು ಕಿಡಿಕಾರಿದರು.

 

ಪ್ರವಾಸ ರದ್ದು ಮಾಡುತ್ತೀರಾ ಅಥವಾ ಮುಂದೂಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾವು ಪ್ರವಾಸ ಮುಂದೂಡವ ಪ್ರಶ್ನೆಯೇ ಇಲ್ಲ. ಈಗಾಗಲೇ ಚೀನಾದಲ್ಲಿ ನ. 6 ಮತ್ತು 7ರಂದು ಅಂತರಾಷ್ಟ್ರೀಯ ಕಾನ್ಫರೆನ್ಸ್ ನಿಗದಿಯಾಗಿದೆ. ನಾವು ಹೋಗದಿದ್ದರೂ ಅದು ನಡದೇ ನಡೆಯುತ್ತೆ. ಆದ್ರೆ ಅಲ್ಲಿ ಕರ್ನಾಟಕದ ಪರವಾಗಿ ಮಂತ್ರಿಗಳು ಇರಲ್ಲ ಅಷ್ಟೆ. ಇತ್ತೀಚೆಗೆ ವಿದೇಶದಿಂದ ಹಲವು ಕೈಗಾರಿಕಾ ಮಂತ್ರಿಗಳು ಕರ್ನಾಟಕಕ್ಕೆ ಬಂದು ಹೋಗಿದ್ದಾರೆ. ಕೈಗಾರಿಕಾ ಮಂತ್ರಿಯಾಗಿ ಜವಾಬ್ದಾರಿ ನಿಭಾಯಿಸಲು, ಬಂಡವಾಳ ಹೂಡಿಕೆ ವಿಚಾರದಲ್ಲಿ ವಿದೇಶಿ ಪ್ರವಾಸಕ್ಕೆ ಹೊರಟಿದ್ದೆ ಹೊರತಾಗಿ ಮೋಜಿಗಾಗಿ ಅಲ್ಲ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *