ಕಾಲೇಜು ಹುಡುಗಿಯರನ್ನು ಚುಡಾಯಿಸೋರನ್ನ ಒದ್ದು ಒಳಗೆ ಹಾಕಿ: ಎಚ್‍ಡಿ ರೇವಣ್ಣ

ಹಾಸನ: ಕಾಲೇಜು ಆವರಣದಲ್ಲಿ ಮದ್ಯಪಾನ ಮಾಡುವ ಹಾಗೂ ವಿದ್ಯಾರ್ಥಿನಿಯರನ್ನು ಚುಡಾಯಿಸುವ ಕಿಡಿಗೇಡಿಗಳನ್ನು ಒದ್ದು ಒಳಗೆ ಹಾಕಿ ಎಂದು ಸಚಿವ ರೇವಣ್ಣ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪ್ರಕಾಶ್ ಗೌಡ ಅವರಿಗೆ ಸೂಚನೆ ನೀಡಿದ್ದಾರೆ.

ಇಂದು ಹಾಸನದ ಜಿಲ್ಲಾ ಸಭಾಂಗಣದಲ್ಲಿ ಶಾಲಾ-ಕಾಲೇಜು ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಸಚಿವರು ಚರ್ಚೆ ನಡೆಸಿದ್ದರು. ಈ ವೇಳೆ ಕಾಲೇಜಿನ ಮುಖ್ಯೋಪಾಧ್ಯಾಯರೊಬ್ಬರು ತಮ್ಮ ಕಾಲೇಜು ಆವರಣದಲ್ಲಿ ಮದ್ಯಪಾನ ಮಾಡಿ, ವಿದ್ಯಾರ್ಥಿನಿಯರನ್ನು ಚುಡಾಯಿಸುವ ಪುಂಡರ ಬಗ್ಗೆ ಮಾಹಿತಿ ನೀಡಿ ಸಚಿವರ ಗಮನ ಸೆಳೆದರು.

ಮುಖ್ಯೋಪಾದ್ಯಾಯರಿಂದ ಮಾಹಿತಿ ಪಡೆಯುತ್ತಿದಂತೆ ಗರಂ ಆದ ಸಚಿವರು, ವಿದ್ಯಾರ್ಥಿನಿಯರಿಗೆ ಚುಡಾಯಿಸುವ ಮತ್ತು ಕಾಲೇಜು ಆವರಣದಲ್ಲಿ ಮದ್ಯಪಾನ ಮಾಡುವ ಕಿಡಿಗೇಡಿಗಳನ್ನು ಪೊಲೀಸರು ಮಫ್ತಿಯಲ್ಲಿ ಹೋಗಿ ಹಿಡಿದು ಒದ್ದು ಒಳಗೆ ಹಾಕುವಂತೆ ಸೂಚನೆ ನೀಡಿದರು. ಇಂತಹ ವಿಚಾರದಲ್ಲಿ ಯಾರೇ ಆಗಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುವುದು ಕಂಡು ಬಂದರೆ ಕೂಡಲೇ ಕ್ರಮಕೈಗೊಳ್ಳಿ, ಅದ್ಯಾವನ್ ಬರ್ತಾನೆ ನಾನು ನೋಡ್ತಿನಿ. 15 ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡಿ ಎಂದು ತಮ್ಮದೇ ಶೈಲಿಯಲ್ಲಿ ಸೂಚನೆ ನೀಡಿದರು.

ಇದೇ ವೇಳೆ ರಾಜ್ಯದ ಶಿಕ್ಷಣದ ಫಲಿತಾಂಶದಲ್ಲಿ ನಮ್ಮ ಜಿಲ್ಲೆ 7 ಸ್ಥಾನದಲ್ಲಿ ಇದ್ದು, ಮೊದಲ ಸ್ಥಾನಕ್ಕೆ ತೆಗೆದುಕೊಂಡು ಹೋಗುವಂತೆ ಶಿಕ್ಷಕರಿಗೆ ಮನವಿ ಮಾಡಿದರು. ಹಳ್ಳಿ ಮಕ್ಕಳು ಹೆಚ್ಚು ಶಿಕ್ಷಣ ಪಡೆಯಲು ಸರ್ಕಾರಿ ಶಾಲೆ, ಕಾಲೇಜುಗಳಿಗೆ ಬರುತ್ತಾರೆ. ಆದ್ದರಿಂದ ನಿಮಗೆ ಯಾವುದೇ ಸೌಲಭ್ಯ ಬೇಕಾದರು ನೀಡುತ್ತೇನೆ. ಎಲ್ಲಾ ಮಕ್ಕಳಿಗೆ ಭಾನುವಾರವೂ ವಿಶೇಷ ತರಗತಿ ನಡೆಸಿ ಎಂದರು. ಈ ಬಾರಿ ಫಲಿತಾಂಶದಲ್ಲಿ ಮುಂದೆ ಬಾರದಿದ್ದರೆ ನಿಮ್ಮ ಮೇಲೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *