ಕುಲಪತಿಗಳು, ವಿಶ್ರಾಂತ ಕುಲಪತಿಗಳು ಎಲ್ಲರು ನನಗೆ ಸಲಹೆಗಾರರು-ಪ್ರತ್ಯೇಕ ಹುದ್ದೆ ಏನೂ ಇಲ್ಲ: ಜಿಟಿಡಿ

ಮೈಸೂರು: ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅವರು ಕುಟುಂಬ ಸಮೇತರಾಗಿ ಇಂದು ಮೈಸೂರು ಚಾಮುಂಡೇಶ್ವರಿ ದೇವಿ ಸೇರಿದಂತೆ ಉತ್ತನಹಳ್ಳಿಯ ತ್ರಿಪುರ ಸುಂದರಿ ದೇವಾಲಯ ಹಾಗೂ ನಂಜನಗೂಡಿನ ನಂಜುಂಡೇಶ್ವರನ ದೇವಾಲಯ, ನನ್ನೇಶ್ವರ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಕುಲಪತಿಗಳು ವಿಶ್ರಾಂತ ಕುಲಪತಿಗಳು ಎಲ್ಲರೂ ನನಗೆ ಸಲಹೆಗಾರರು. ಅದಕ್ಕೆಂದು ಪ್ರತ್ಯೇಕ ಹುದ್ದೆ ಏನೂ ಇಲ್ಲ ಎಂದು ಹೇಳುವ ಮೂಲಕ ಉನ್ನತ ಶಿಕ್ಷಣ ಇಲಾಖೆಗೆ ಸಲಹೆಗಾರ ಹುದ್ದೆ ಸೃಷ್ಟಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಮೈಸೂರು ವಿವಿ ಕುಲಪತಿ ಹುದ್ದೆ ಸೇರಿದಂತೆ ಇತರೆ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳುತ್ತೇನೆ. ಇಲಾಖೆಯನ್ನು ಬಡವರ ಬಳಿಗೆ ಗ್ರಾಮಾಂತರಕ್ಕೆ ಕೊಂಡೊಯ್ಯುತ್ತೇನೆ ಎಂದರು.

ಗುರುವಾರ ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಮೈಸೂರು ಭಾಗದ ಜೆಡಿಎಸ್ ಮುಖಂಡರ ನಡುವೆ ಉಂಟಾದ ಅಸಮಾಧಾನ ವಿಚಾರದ ಪ್ರಶ್ನೆಗೆ ಉತ್ತರಿಸಿದ, ನಾನೂ ಆ ವೇಳೆ ಸಭೆಯಲ್ಲಿ ಇರಲಿಲ್ಲ. ಮೇಲ್ಮನೆ ಪ್ರಶ್ನೋತ್ತರ ಕಲಾಪದಲ್ಲಿ ಭಾಗಿಯಾಗಿದ್ದೆ. ಆ ವಿಚಾರ ನನಗೆ ಗೊತ್ತಿಲ್ಲ ಎಂದರು.

ಕೆಆರ್‌ಎಸ್‌ ನಲ್ಲಿ ಬಾಗಿನ: ಜುಲೈ20ರ ಮೊದಲ ಆಷಾಢ ಶುಕ್ರವಾರಕ್ಕೆ ಮೈಸೂರಿಗೆ ಸಿಎಂ ಕುಮಾರಸ್ವಾಮಿ ಆಗಮಿಸುತ್ತಾರೆ. ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಲಿರುವ ಸಿಎಂ ಬಳಿಕ ಕೆಆರ್‍ರಸ್ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡುತ್ತಾರೆ. ತದನಂತರ ಕಬಿನಿ ಜಲಾಶಕ್ಕೂ ಬಾಗಿನ ಅರ್ಪಿಸಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

Comments

Leave a Reply

Your email address will not be published. Required fields are marked *