ಪಾಪ ಬಿಜೆಪಿಯವರಿಗೆ ಏನೂ ಗೊತ್ತಿಲ್ಲ: ಡಿಕೆಶಿ ವ್ಯಂಗ್ಯ

– ಸದ್ಯದಲ್ಲಿ ಎಲ್ಲವೂ ನಿರಾಳ
– ಸಿಎಂ ಬೆನ್ನಿಗೆ ಚೂರಿ ಹಾಕುವ ವ್ಯಕ್ತಿ ನಾನಲ್ಲ

ಬೆಂಗಳೂರು: ಅತೃಪ್ತ ಶಾಸಕರು ಮುಂಬೈ ಸೇರಿರುವ ಬೆನ್ನಲ್ಲೇ ಇಂದು ನಗರದಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಯುತ್ತಿದೆ. ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಪಾಪ ಬಿಜೆಪಿಯವರಿಗೆ ಏನೂ ಗೊತ್ತಿಲ್ಲ. ಕಣ್ಣ್ಮುಚ್ಚಿ ಹಾಲು ಕುಡಿಯುತ್ತಿರೋದು ಯಾರಿಗೂ ಗೊತ್ತಿಲ್ಲ ಎಂಬ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಳೆದ ಒಂದೂವರೆ ವರ್ಷಗಳಿಂದಲೂ ಪಕ್ಷದಲ್ಲಿ ಸಭೆಗಳು ನಡೆಯುತ್ತಿವೆ. ಇಂದು ಸಹ ಸಭೆ ಕರೆಯಲಾಗಿದ್ದು, ಹಾಜರಾಗಲು ತೆರಳುತ್ತಿದ್ದೇನೆ. ಪಕ್ಷದ ಹಿರಿಯ ಮುಖಂಡರು ಸಹ ಸಭೆಯಲ್ಲಿ ಭಾಗಿಯಾಗುತ್ತಿದ್ದು, ಸದ್ಯದಲ್ಲಿ ಎಲ್ಲವೂ ನಿರಾಳ ಆಗಲಿದೆ. ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂಬುದನ್ನು ಹೇಳಲಾರೆ. ಬಿಜೆಪಿಯವರು ಮಾತ್ರ ಅತೃಪ್ತರ ಶಾಸಕರ ರಾಜೀನಾಮೆಗೆ ನಮಗೆ ಸಂಬಂಧವಿಲ್ಲ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಬಿಜೆಪಿ ಮುಖಂಡರು ಎಲ್ಲಿ ಯಾರನ್ನು ಭೇಟಿಯಾಗಿ ಸಭೆ ನಡೆಸುತ್ತಿದ್ದಾರೆ ಎಲ್ಲ ವಿಷಯಗಳು ನಮಗೆ ಗೊತ್ತಿದೆ. ಸರ್ಕಾರ ರಚನೆ ಮಾಡಲ್ಲ ಎಂದು ಹೇಳುತ್ತಿದ್ದ ಬಿಜೆಪಿ ನಾಯಕರು ಸರ್ಕಾರ ರಚಿಸಲು ಮುಂದಾಗುತ್ತಿದ್ದಾರೆ ಎಂದು ಕಿಡಿಕಾರಿದರು.

ಚೂರಿ ಹಾಕಲ್ಲ: ಜೆಡಿಎಸ್‍ನವರೇ ಮುಂದಿನ ಐದು ವರ್ಷಗಳ ಕಾಲ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಂಬುದಾಗಿ ಒಪ್ಪಂದವನ್ನು ಮಾಡಿಕೊಂಡಿದ್ದೇವೆ. ಹಾಗಾಗಿ ಸಿಎಂ ಬೆನ್ನಿಗೆ ಚೂರಿ ಹಾಕುವ ವ್ಯಕ್ತಿ ನಾನಲ್ಲ. ಇನ್ನು ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡುವುದು ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು. ಅತೃಪ್ತ ಎಲ್ಲ ಶಾಸಕರಿಗೂ ಮಂತ್ರಿ ಮಾಡುತ್ತೇವೆ ಎಂದು ಬಿಜೆಪಿ ಆಮಿಷ ನೀಡಿದೆ. ಯಾರ ಬೆನ್ನಿಗೂ ಚೂರಿ ಹಾಕಿ ಅಧಿಕಾರ ಕೊಡಿ ಎಂದು ಕೇಳುವ ಜಾಯಮಾನದ ವ್ಯಕ್ತಿ ನಾನಲ್ಲ. ಪಕ್ಷಕ್ಕಾಗಿ ಅಧಿಕಾರ ತ್ಯಾಗ ಮಾಡಲು ನಾನು ಸಿದ್ಧನಿದ್ದೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ರಾಜ್ಯದಲ್ಲಿ ಪಕ್ಷ ಮತ್ತು ಸರ್ಕಾರ ಉಳಿಯಲಿ ಎಂಬ ಉದ್ದೇಶದಿಂದ ನಾನು ಕೆಲಸ ಮಾಡುತ್ತಿದ್ದೇನೆ. ಎಲ್ಲ 75ರಿಂದ 78 ಶಾಸಕರು ಚುನಾವಣೆಗೆ ಹೋಗೋದು ಬೇಡ ಎಂದು ಹೇಳಿಕೊಂಡಿದ್ದಾರೆ. ಆದರೆ ಚುನಾವಣೆ ಬಂದರೆ ಅದಕ್ಕೆ ನಾವು ಹೆದರಲ್ಲ. ನಾನು ಚುನಾವಣೆಗೆ ಹೆದರಲ್ಲ ಎಂಬುವುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಯ ಕೆಲ ಶಾಸಕರು ನನ್ನನ್ನು ಸಂಪರ್ಕಿಸಿ ಚುನಾವಣೆಗೆ ಹೋಗದಂತೆ ಏನಾದರು ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಬಿಜೆಪಿ ನಾಯಕರು ಹೊಸ ಚುನಾವಣೆಗೆ ಹೋಗಬೇಕೆಂಬ ತಂತ್ರಗಳನ್ನು ಮಾಡಿಕೊಳ್ಳುತ್ತಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಸರ್ಕಾರ ರಚನೆ ಮಾಡಿ ಮಂತ್ರಿಯಾದರೆ ಸಾಕು ಎಂದು ಓಡಾಡುತ್ತಿದ್ದಾರೆ. ಶಾಸಕರಿಗೆ ಆಫರ್ ನೀಡಿದ್ದು, ನೋಡೋಣ ಎಲ್ಲರನ್ನು ಮಂತ್ರಿ ಮಾಡಿಕೊಳ್ಳಲಿ ಎಂದು ಹೇಳಿದರು.

Comments

Leave a Reply

Your email address will not be published. Required fields are marked *