ನಾವು ಹಳ್ಳಿಪಳ್ಳಿಯಲ್ಲಿದ್ದವರು, ಎಂಬಿಪಿ ಹೇಳಿಕೆಯನ್ನು ಪ್ರಸಾದವಾಗಿ ಸ್ವೀಕರಿಸುತ್ತೇನೆ: ಡಿಕೆಶಿ

ಬೆಂಗಳೂರು: ಗೃಹ ಸಚಿವ ಎಂ.ಬಿ ಪಾಟೀಲ್ ದೊಡ್ಡವರು. ನಾವು ಹಳ್ಳಿಪಳ್ಳಿಯಲ್ಲಿದ್ದವರು. ಹೀಗಾಗಿ ಅವರು ಏನ್ ಹೇಳಿದ್ರೂ ನಾವು ಬಹಳ ಸಂತೋಷದಿಂದ ಪ್ರಸಾದ ಎಂದು ಸ್ವೀಕರಿಸುತ್ತೇನೆ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಸಚಿವ ಎಂ.ಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ದೊಡ್ಡವರು ಏನ್ ಬೇಕಿದ್ರೂ ಮಾತನಾಡಬಹುದು. ನಾವು ಅವರಷ್ಟು ದೊಡ್ಡವರಲ್ಲ. ನಾವು ಹಳ್ಳಿಯಿಂದ ಬಂದಂತಹ ಕಾರ್ಯಕರ್ತರು. ಸುಮ್ನೆ ವ್ಯವಸಾಯ-ಗೀಸಾಯ ಮಾಡಿಕೊಂಡು ಬದುಕುತ್ತಾ ಇದ್ದೇವೆ ಅಂದ್ರು.

ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಬಗ್ಗೆ ನನ್ನ ಮಾತನ್ನು ಯಾವತ್ತೂ ಬದಲಾವಣೆ ಮಾಡಿಕೊಳ್ಳಲ್ಲ. ಟೀಕೆ ಟಿಪ್ಪಣಿಗಳಿಗೆ, ಏಕವಚನ ಬಹುವಚನಕ್ಕೆ ನಾನು ತಲೆಕೆಡಿಸಿಕೊಳ್ಳಲ್ಲ. ಬಿಜೆಪಿಗೆ ಈ ಗಲಾಟೆಯಿಂದ ಲಾಭವಾಗುತ್ತಾ ಅನ್ನೋದನ್ನು ಪಕ್ಷ ನೋಡುತ್ತದೆ ಎಂದು ಹೇಳಿದರು.

ಒಕ್ಕಲಿಗರನ್ನು ಮೊದಲು ಗೆಲ್ಲಿಸಿಕೊಂಡು ನಂತರ ನಮ್ಮ ಕಡೆ ಬರಲಿ ಎಂಬ ಎಂ.ಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಯಾವ ಒಕ್ಕಲಿಗರನ್ನು ಗೆಲ್ಲಿಸುವ ಶಕ್ತಿಯೂ ಇಲ್ಲ. ಸುಮ್ನೆ 4 ಹಳ್ಳಿ-ಪಳ್ಳಿಯಲ್ಲಿ ಜನ ನನಗೆ ವೋಟ್ ಹಾಕ್ತಾರೆ ಅಷ್ಟೆ ಅಂದ್ರು. ಇದನ್ನೂ ಓದಿ: ಲಿಂಗಾಯತ ವಿಚಾರದಲ್ಲಿ ಪಕ್ಷದ ಪರವಾಗಿ ಕ್ಷಮೆ ಕೇಳಲು ಡಿಕೆಶಿ ಯಾರು: ಎಂ.ಬಿ.ಪಾಟೀಲ್ ಪ್ರಶ್ನೆ

ಲೋಕಸಭಾ ಚುನಾವಣೆಯ ಹೊತ್ತಲ್ಲಿ ಇಂತಹ ಹೇಳಿಕೆಗಳು ಪಕ್ಷದ ಮೇಲೆ ಪರಿಣಾಮ ಬೀರಲಿದ್ದು, ಕಾಂಗ್ರೆಸ್ ಹೈಕಮಾಂಡ್, ರಾಹುಲ್ ಗಾಂಧಿಗೂ ಈ ಬಗ್ಗೆ ದೂರು ಕೊಡುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ಬಹಳ ಸಂತೋಷವಾಗುತ್ತದೆ. ಪಕ್ಷ ಒಳ್ಳೆಯದಾಗಬೇಕಿದ್ರೆ ಶಿಸ್ತು ಇರಬೇಕು. ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಮಾರ್ಮಿಕವಾಗಿ ಉತ್ತರಿಸಿದರು.

Comments

Leave a Reply

Your email address will not be published. Required fields are marked *