ನರ್ಸ್ ಗಳಿಗೆ ನಿಂದನೆ ವೇಳೆ ಸಚಿವರ ಹೆಸರು ದುರ್ಬಳಕೆ- ಡಿಕೆಶಿ ಪ್ರತಿಕ್ರಿಯಿಸಿದ್ದು ಹೀಗೆ

ಬೆಂಗಳೂರು: ನರ್ಸ್ ಗಳಿಗೆ ನಿಂದಿಸಿದ್ದ ವೇಳೆ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮ್ ಸೆಂಟರ್ ವೈದ್ಯಾಧಿಕಾರಿ ಬಾಲಾಜಿ ಪೈ, ಸಚಿವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹೆಸರನ್ನ ಯಾರೂ ದುರುಪಯೋಗ ಮಾಡಿಕೊಳ್ಳಲು ಬಿಡಲ್ಲ. ಇಲಾಖೆಯಲ್ಲಿ ಏನು ನಡೀತಿದೆ ನನಗೆ ಗೊತ್ತಿದೆ ಆ್ಯಕ್ಷನ್ ತೆಗೆದುಕೊಳ್ಳೋಣ ಅಂತ ಹೇಳಿದ್ರು.

ಇದೇ ವೇಳೆ ಮೈತ್ರಿ ಸರ್ಕಾರಕ್ಕೆ ಭವಿಷ್ಯವಿಲ್ಲ ಎಂಬ ಕೆ.ಎನ್ ರಾಜಣ್ಣ ಹೇಳಿಕೆ ಸಂಬಂಧ ಮಾತನಾಡಿದ ಸಚಿವರು, ಯಾರು ಮೈತ್ರಿ ಸರ್ಕಾರದ ಬಗ್ಗೆ ಅಪಸ್ವರ ಎತ್ತಿ ಮಾತನಾಡಬಾರದು ಅಂತ ಈಗಾಗಲೇ ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆ ಪಕ್ಷವನ್ನ ಹೇಗೆ ಉಳಿಸಿಕೊಳ್ಳಬೇಕು ಅದನ್ನ ಮಾಡ್ತೇವೆ. ನಮ್ಮ ನಾಯಕರು ಕೆಲವು ಮಿತಿಗಳನ್ನ ಹಾಕಿದ್ದಾರೆ. ಆ ಮಿತಿಯೊಳಗೆ ಎಲ್ಲರೂ ಕೆಲಸ ಮಾಡಿದ್ರೆ ಪಕ್ಷ ಉಳಿಸಿಕೊಳ್ಳಬಹುದು ಅಂದ್ರು.

ವಿಶೇಷಾಧಿಕಾರಿ ವಿರುದ್ಧದ ಆರೋಪವೇನು?:
ರೆಕಾರ್ಡ್ ನಿರ್ವಹಿಸುವ ವಿಚಾರದಲ್ಲಿ ಜಗಳವಾಗಿದೆ. ಪರಿಶೀಲನೆಗೆ ಬಂದ ಸಂದರ್ಭದಲ್ಲಿ ಡೀನ್ ಗೆ ರೆಕಾರ್ಡ್ ಕೊಡುವುದು ಆಕೆಯ ಜವಾಬ್ದಾರಿಯಾಗಿತ್ತು. ಹಾಗೆಯೇ ಆಕೆ ಅದನ್ನು ಡೀನ್ ಗೆ ಕೊಟ್ಟಿದ್ದಾರೆ. ಆದ್ರೆ ಬಾಲಾಜಿ ಅವರ ಗಮನಕ್ಕೆ ತಾರದೇ ಕೊಟ್ಟಿದ್ದಕ್ಕೆ ಪೈ ನರ್ಸ್ ಅನ್ನು ಅಶ್ಲೀಲವಾಗಿ ನಿಂದಿಸಿದ್ದಾರೆ ಎನ್ನಲಾಗಿತ್ತು.

ಏನಮ್ಮ ಅವರು ಕೇಳಿದ್ದನ್ನೆಲ್ಲಾ ಕೋಡೋಕೆ ನಿಮಗೆ ನಾಚಿಕೆ ಆಗಲ್ವಾ. ನಾಳೆ ಸಚಿವ ಡಿಕೆ ಶಿವಕುಮಾರ್ ಬಂದು ಬಾಲಾಜಿ ಎರಡು ಸ್ಟಾಫ್ ನರ್ಸ್‍ಗಳನ್ನು ರೇಪ್ ಮಾಡು ಅಂತಾರೆ. ಆಗ ನೀವು ರೇಪ್ ಮಾಡಿಸಿಕೊಳ್ಳಲು ರೆಡಿ ಇರ್ತೀರಾ? ಯಾಕಂದ್ರೆ ಮಂತ್ರಿಗಳಲ್ವಾ ಅವರು. ಹೀಗಾಗಿ ಅವರು ಹೇಳಿದಾಗ ನೀವು ರೆಪ್ಯೂಸ್ ಮಾಡಂಗಿಲ್ಲ ಅಂತ ಪೈ ನಿಂದಿಸಿದ್ದಾರೆ ಅಂತ ನರ್ಸ್ ಗಳು ಆರೋಪಿಸಿದ್ದರು. ಅಲ್ಲದೇ ಬಾಲಾಜಿ ಪೈ ವಿರುದ್ಧ ಟ್ರಾಮಾ ಸೆಂಟರ್‍ನ ಸ್ಟಾಫ್ ನರ್ಸ್, ಬಿಎಂಸಿ ಡೀನ್‍ಗೆ ದೂರು ನೀಡಿದ್ದರು. 20ಕ್ಕೂ ಹೆಚ್ಚು ಸ್ಟಾಫ್ ನರ್ಸ್‍ಗಳು ನೀಡಿದ ಲಿಖಿತ ದೂರಿನ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು.

ಬಾಲಾಜಿಯಿಂದ ಸ್ಪಷ್ಟನೆ:
ವೈದ್ಯರೊಬ್ಬರು ಬಂದು ರೆಕಾರ್ಡ್ ಕೇಳಿದ್ದಾರೆ ಅಂತ ನನ್ನ ಬಳಿ ದೂರು ಕೊಟ್ಟರು. ಈ ವೇಳೆ ನಾನು ಲಿಖಿತ ದೂರು ನೀಡಿ ಅಂತ ಹೇಳಿದ್ದೆ. ಆದ್ರೆ ಅವರು ನನ್ನ ಜೊತೆ ಉಲ್ಟಾ ಮಾತಾಡಿದ್ರು. ಆದ್ರೆ ಸಚಿವರ ಹೆಸರನ್ನು ಪ್ರಸ್ತಾಪವೇ ಮಾಡಿಲ್ಲ. ಅಷ್ಟೊಂದು ತಿಳಿಯದ ದಡ್ಡ ನಾನಲ್ಲ. ಇದೀಗ ಈ ವಿಚಾರ ನನಗೆ ಇರುಸು ಮುರುಸು ತಂದಿದೆ ಅಂತ ಹೇಳಿದ್ದರು.

ಘಟನೆ ಬಗ್ಗೆ ಅವರನ್ನೇ ತನಿಖೆ ನಡೆಸಲಿ. ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ನಾನು ಅವರಿಗೆ ಬೈದಿಲ್ಲ. ಬದಲಾಗಿ ನಾನೇ ನಿಮಗೆ ಬೆಂಬಲ ಕೊಡುತ್ತೇನೆ. ಈ ಬಗ್ಗೆ ನೀವು ಚಿಂತೆ ಮಾಡಬೇಡಿ. ಏನಾದ್ರೂ ನಾನಿದ್ದೇನೆ ಅಂತ ಹೇಳಿದ್ದೆ. ಆದ್ರೆ ನರ್ಸ್ ಯಾಕೆ ನನ್ನ ವಿರುದ್ಧ ಡೀನ್ ಗೆ ದೂರು ನೀಡಿದ್ದಾರೆ ಅಂತ ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ಈ ಬಗ್ಗೆ ನನಗೇನೂ ಗೊತ್ತಿಲ್ಲ ಅಂದ್ರು.

Comments

Leave a Reply

Your email address will not be published. Required fields are marked *