ಅನ್ನ ಭಾಗ್ಯ ಅಕ್ಕಿ ಕಡಿತ: ಮಾಜಿ ಸಿಎಂಗೆ ಡಿಕೆಶಿ ಟಾಂಗ್

ಬೆಂಗಳೂರು: 2 ಕೆ.ಜಿ. ಪಡಿತರ ಅಕ್ಕಿ ಕಡಿತದ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದ ವಿಚಾರವಾಗಿ ಈಗ ಪರೋಕ್ಷವಾಗಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.

ಯಾರಿಗೆ ಆಗಲಿ ಒತ್ತಡ ಹೇರೋಕೆ ಒಂದು ಲಿಮಿಟ್ ಇರುತ್ತದೆ. ಸಿಎಂ ಕುಮಾರಸ್ವಾಮಿ ಈಗಾಗಲೇ ಅಕ್ಕಿ ವಿತರಣೆಯ ವಿಚಾರ ಸ್ಪಷ್ಟಪಡಿಸಿದ್ದಾರೆ. 7 ಕೆ.ಜಿ. ಅಕ್ಕಿ ಕೊಡುವುದರಿಂದ 2,500 ಕೋಟಿ ರೂ. ಹೊರೆಯಾಗುತ್ತದೆ. ಕೆಲವರು 7 ಕೆ.ಜಿ ಅಕ್ಕಿ ಕೇಳಿದ್ದಾರೆ. ಇನ್ನು ಕೆಲವರು 5 ಕೆ.ಜಿ ಕೇಳಿದ್ದಾರೆ. ಇಂತ ಹಲವು ದ್ವಂದ್ವಗಳಿವೆ. ಯಾರೂ ಈ ಬಗ್ಗೆ ಗಾಬರಿ ಪಡಬೇಕಿಲ್ಲ. ಸಿದ್ದರಾಮಯ್ಯ ತಮ್ಮ ಅಭಿಪ್ರಾಯವನ್ನು ತಾವು ಪತ್ರದ ಮೂಲಕ ಹೇಳಿದ್ದಾರೆ. ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ಹೇಳುತ್ತಾರೆ ಎಂದು ಶಿವಕುಮಾರ್ ಹೇಳಿದರು. ಇದನ್ನೂ ಓದಿ: ಅನ್ನಭಾಗ್ಯದ ಭಾವನಾತ್ಮಕ ನಂಟು ತೆರೆದಿಟ್ಟು ಎಚ್‍ಡಿಕೆಗೆ ದೀರ್ಘ ಪತ್ರ ಬರೆದ ಮಾಜಿ ಸಿಎಂ

ಕೆಲವರು ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದಿದ್ದಾರೆ. ಹಾಗಂತ ಉತ್ತರ ಕರ್ನಾಟಕಕ್ಕೆ ನಿರ್ಲಕ್ಷ್ಯ ಆಗಿದೆಯಾ? ನೀರಾವರಿ ಇಲಾಖೆಯಲ್ಲಿ ಕೇವಲ 2.5 ಕೋಟಿ ರೂ. ಮಾತ್ರ ಕಾವೇರಿ ಪ್ರದೇಶಾಭಿವೃದ್ಧಿಗೆ ನೀಡಲಾಗಿದೆ. ಉಳಿದದ್ದು ಉತ್ತರ ಕರ್ನಾಟಕಕ್ಕೇ ನೀಡಲಾಗಿದೆ. ಸಂಬಳ, ಸಾರಿಗೆ ಮುಂತಾದ ಕೆಲಸಗಳಿವೆ. ಹೈದರಾಬಾದ್ ಕರ್ನಾಟಕ ಪ್ರಾದೇಶಾಭಿವೃದ್ಧಿ ಸಂಬಂಧಿಸಿದಂತೆ ಅನುದಾನವಿದ್ದು, ಆ ಹಣವನ್ನು ಬೇರೆ ಕಡೆ ಖರ್ಚು ಮಾಡಲು ಆಗುತ್ತಾ? ಸಲಹೆ ಕೊಡೋದು ತಪ್ಪಲ್ಲ. ಇದರಲ್ಲಿ ರಾಜಕಾರಣ ಸೃಷ್ಟಿ ಮಾಡೋದು ಸರಿಯಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸಭೆ ಸಚಿವಾಲಯದಿಂದ ಸೂಟ್ ಕೇಸ್ ಖರೀದಿ ವಿಚಾರವಾದ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಅದು ನನಗೆ ಗೊತ್ತಿಲ್ಲ. ಅದು ವಿಧಾನಸಭಾ ಸಚಿವಾಲಯ ವಿಚಾರ. ಸ್ಪೀಕರ್ ಗರಂ ಆಗಿದ್ದ ವಿಚಾರವೂ ಗೊತ್ತಿಲ್ಲ. ಸ್ಪೀಕರ್ ಅದೆಲ್ಲವನ್ನೂ ವಿಚಾರ ಮಾಡುತ್ತಾರೆ ಎಂದು ತಿಳಿಸಿದರು.

ನಿರ್ಧಾರ ಆಗಿಲ್ಲ: ಮಂಡ್ಯ ಲೋಕಸಭೆ ಉಪಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ವೇಣುಗೋಪಾಲ್, ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಡ್ಯಾನಿಷ್ ಅಲಿ ನೇತೃತ್ವದಲ್ಲಿ ಸಭೆ ಕರೆದು ತೀರ್ಮಾನ ಆಗಿದೆ. ಒಟ್ಟಿಗೆ ಲೋಕಸಭೆ ಚುನಾವಣೆಗೆ ಹೋಗುತ್ತೇವೆ. ಆದರೆ ಮಂಡ್ಯದಲ್ಲಿ ಯಾರಿಗೆ ಟಿಕೆಟ್ ಅನ್ನೋದು ಈಗಲೇ ನಿರ್ಧಾರ ಆಗಿಲ್ಲ. ಅದನ್ನ ಎಲ್ಲ ನಾಯಕರು ಕೂತು ಚರ್ಚೆ ಮಾಡಿ ಮಾಧ್ಯಮಗಳ ಮುಂದೆ ಬರುತ್ತೇವೆ ಎಂದು ಸ್ಪಷ್ಟಪಡಿಸಿದರು.

ದೆಹಲಿಯಲ್ಲಿ ಚರ್ಚೆ: ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಜುಲೈ 18ಕ್ಕೆ ದೆಹಲಿಯಲ್ಲಿ ಸಂಸದರ ಸಭೆ ಕರೆಯಲಾಗಿದೆ. ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಜುಲೈ 18ಕ್ಕೆ ದೆಹಲಿಗೆ ಹೋಗೋಣ ಅಂದಿದ್ದಾರೆ. ಅಂದು ದೆಹಲಿಯಲ್ಲಿ ಎಲ್ಲ ಸಂಸದರ ಸಭೆ ಕರೆಯಲಾಗಿದೆ. ಈ ರಾಜ್ಯದ ಹಿತ ಕಾಯಲು ಪಕ್ಷ ಬೇಧ ಮರೆತು ಎಲ್ಲರೂ ಚರ್ಚೆ ಮಾಡುತ್ತೀವಿ. ಕಾವೇರಿ ವಿಚಾರದಲ್ಲಿ ನಮ್ಮ ಎಲ್ಲ ದಾಖಲೆಗಳನ್ನು ಸಲ್ಲಿಕೆ ಮಾಡುತ್ತೇವೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *