ಐಟಿ ದಾಳಿ ಮುಕ್ತಾಯವಾದ ಬಳಿಕ ಸಚಿವ ಡಿಕೆಶಿ ಹೇಳಿದ್ದೇನು?

ಬೆಂಗಳೂರು: ಸತತ ಮೂರು ದಿನಗಳಿಂದ ಇಂಧನ ಸಚಿವ ಡಿಕೆ ಶಿವಕುಮಾರ್ ಮನೆಯಲ್ಲಿ ನಡೆದಿದ್ದ ಐಟಿ ದಾಳಿ ಇಂದು ಮುಕ್ತಾಯವಾಗಿದೆ. ಮೂರು ದಿನಗಳ ದಾಳಿ ಮುಕ್ತಾಯವಾದ ಬಳಿಕ ಡಿಕೆಶಿ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಳೆದ ಮೂರು ದಿನಗಳಿಂದ ನನ್ನ ಮನೆ, ಸ್ನೇಹಿತರ ಮನೆ ಹಾಗೂ ನನ್ನ ಸಂಬಂಧಿಕರ ಮನೆ ಮೇಲೆ ಐಟಿ ದಾಳಿಯಾಗಿದ್ದು, ತಾವೆಲ್ಲಾ ಹಗಲು ರಾತ್ರಿ ಕಾಯ್ತಾ ಇದ್ದೀರಿ. ತಮ್ಮದೇ ಆದ ವಿಚಾರಗಳನ್ನು ಮಾಧ್ಯಮದಲ್ಲಿ ಚಿತ್ರಿಸಿದ್ದೀರಿ. ಈಗ ನಾನೇನೂ ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಅಂತ ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ರು.

ನನಗೆ ಮಾಧ್ಯಮಗಳು, ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಅಲ್ಲದೇ ವಿವಿಧ ಪಕ್ಷದ ನಾಯಕರು, ಅಧಿಕಾರಿಗಳು ತಾವೆಲ್ಲರೂ ಪ್ರೋತ್ಸಾಹ ಹಾಗೂ ಬೆಂಬಲ ಕೊಟ್ಟಿದ್ದೀರಿ. ನಿಮಗೆಲ್ಲರಿಗೂ ನನ್ನ ಧನ್ಯವಾದಗಳು ಅಂದ್ರು.

ಕಾನೂನು ಚೌಕಟ್ಟು ಬಿಟ್ಟು ಹಾಗೂ ಸಂವಿಧಾನವನ್ನು ಬಿಟ್ಟು ನಾನು ನಡೆಯುವಂತಹ ವ್ಯಕ್ತಿ ಅಲ್ಲ. ನನ್ನ ಮನೆಯಲ್ಲಿ ಹಾಗೂ ನನ್ನ ದೆಹಲಿ ಮನೆಯಲ್ಲಿ ಏನು ಸಿಕ್ಕಿದೆ ಅನ್ನೋದು ಎಲ್ಲವೂ ಕೂಡ ಪಂಚನಾಮ ಬಂದ ಮೇಲೆ ಕಾಪಿ ತೆಗೆದುಕೊಂಡು ನಾನು ಮಾತಾಡ್ತೇನೆ. ನಿಮ್ಮನ್ನೆಲ್ಲಾ ಖಂಡಿತಾ ಕರೀತಿನಿ. ಸದ್ಯ ನಾನು ನಂಬಿದಂತಹ ದೇವರ ಬಳಿ ಹೋಗಬೇಕಾಗಿದೆ ಅಂತ ಹೇಳಿದ್ರು.

ಒಟ್ಟಿನಲ್ಲಿ ನಾನು ಏನನ್ನೂ ಈಗ ಹೇಳಲಾರೆ. ದಾಖಲೆ ಮಾತ್ರ ಹೇಳಬೇಕಷ್ಟೇ. ಹೀಗಾಗಿ ದಾಖಲೆ ಸಮೇತ ಪ್ರತಿಯೊಬ್ಬರಿಗೂ ಉತ್ತರ ನೀಡಲು ತಯಾರಿದ್ದೇನೆ. ನಿಮ್ಮನ್ನೆಲ್ಲಾ ಹಂಗೆ ಬಿಟ್ಟು ಹೋಗಬಾರದೆಂಬ ದೃಷ್ಟಿಯಿಂದ ರಾತ್ರಿಯಿಡಿ ತಾವೆಲ್ಲಾ ಕಾದಿದ್ದೀರಿ. ಹೀಗಾಗಿ ನಿಮ್ಮ ಮನಸ್ಸು ನೋಯಿಸಬಾರದು. ನೀವಿಲ್ಲಂದ್ರೆ ನಾವ್ಯಾರು ಬದುಕಲು ಸಾಧ್ಯವಿಲ್ಲ ಅಂದ್ರು.

ಒಳ್ಳೆಯದು ಚಿತ್ರ ಮಾಡಬಹುದು, ಕೆಟ್ಟದನ್ನೂ ಚಿತ್ರ ಮಾಡಬಹುದು. ಅದು ನಿಮಗೆ ಖುಷಿಪಟ್ಟಂತಹ ವಿಚಾರ. ಆದ್ರೆ ಸತ್ಯಾಂಶವನ್ನು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ. ಒಟ್ಟಿನಲ್ಲಿ ನಾನು ನಂಬಿದಂತರಹ ದೇವಸ್ಥಾನಕ್ಕೆ ತೆರಳಲಿದ್ದೇನೆ. ಆ ಬಳಿಕ ನನ್ನ ನಂಬಿ ಬಂದಂತಹ ಶಾಸಕರನ್ನು ಭೇಟಿಯಾಗಲಿದ್ದೇನೆ ಅಂತ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.

https://www.youtube.com/watch?v=1hWVXuy2xRs

 

 

 

 

Comments

Leave a Reply

Your email address will not be published. Required fields are marked *