ಸಿದ್ದರಾಮಯ್ಯ ಏನಾದ್ರು ಸತ್ಯ ಹರಿಶ್ಚಂದ್ರನಾ: ಶ್ರೀರಾಮುಲು ಕಿಡಿ

ಚಿತ್ರದುರ್ಗ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಏನಾದ್ರು ಸತ್ಯ ಹರಿಶ್ಚಂದ್ರನಾ? ಅವರು ಸತ್ಯಹರಿಶ್ಚಂದ್ರ ಆಗಿದ್ದರೆ ಅವರ ಮಾತು ಕೇಳಬಹುದಿತ್ತು ಎಂದು ಆರೋಗ್ಯ ಸಚಿವ ಶ್ರೀರಾಮುಲು ಗುಡುಗಿದ್ದಾರೆ.

ನಗರಲ್ಲಿ ಮಾತನಾಡಿದ ಸಚಿವರು, ಸುಳ್ಳು ಅಂದ್ರೆ ಬಿಜೆಪಿಗೆ ಮನೆದೇವರು ಎನ್ನುವ ಸಿದ್ದರಾಮಯ್ಯನವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಅವರ ಹಿನ್ನೆಲೆ ಏನೆಂದು ನಮಗೆ ಗೊತ್ತಿದೆ. ಅವರು ಎಲ್ಲಿದ್ದರು, ಎಲ್ಲಿಗೆ ಬಂದರು ಎನ್ನುವುದನ್ನ ನಾವು ನೋಡಿದ್ದೇವೆ. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಯಾವ ರೀತಿ ಕೆಲಸ ಮಾಡಿದೆ ಅಂತ ನೋಡಿಕೊಂಡು ಬಿಜೆಪಿ ಬಗ್ಗೆ ಆರೋಪ ಮಾಡಲಿ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಅವರು 5 ವರ್ಷ ಆಡಳಿತ ನಡೆಸಿದರು. ಆದರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೇವಲ 70 ಸ್ಥಾನ ಬಂತು. ನಂತರ ಅವರೇ ಕಾಂಗ್ರೆಸ್, ಜೆಡಿಎಸ್‌ನ ಸಮ್ಮಿಶ್ರ ಸರ್ಕಾರ ಮಾಡಿ ಕೊನೆಗೆ ಅದನ್ನು ಬೀಳಿಸಿದರು. ಈಗ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಜೈಲಿನಿಂದ ಬಂದಿರುವುದನ್ನ ಸಹಿಸಲಾಗದೇ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಏನೇ ಮಾಡಿದರೂ ವಿರೋಧ ಪಕ್ಷದ ನಾಯಕರಾಗಿಯೇ ಮುಂದುವರಿಯುತ್ತಾರೆ ಹೊರೆತು ಆಡಳಿತ ಪಕ್ಷದ ನಾಯಕರಾಗಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್‌ನವರು ಭ್ರಷ್ಟಾಚಾರ ಮಾಡುವ ಮೂಲಕ ದೇಶವನ್ನೇ ದಿವಾಳಿ ಮಾಡಿದ್ದಾರೆ. ಇದನ್ನು ಸರಿ ಪಡಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಇಡೀ ವಿಶ್ವವೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳುತ್ತಿದೆ. ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತಿದೆ. ಸತ್ಯ, ಧರ್ಮವನ್ನು ಕಾಪಾಡುತ್ತಿರುವ ಬಿಜೆಪಿಗೆ ಜನ ಮಣೆ ಹಾಕುತ್ತಿದ್ದಾರೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *