ದೇಶದ್ರೋಹಿಗಳನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಬೇಕು: ಸಚಿವ ಬಿ.ಸಿ ಪಾಟೀಲ್

– ಕ್ಯಾಸಿನೊ ಮಾದರಿಯ ಜೂಜು ಅಡ್ಡೆ ಯೋಜನೆ ಸ್ವಾಗತಾರ್ಹ
– ಸಿದ್ದರಾಮಯ್ಯರಿಗೆ ಮನದಲ್ಲಿ ನಮ್ಮ ಮೇಲೆ ಬಹಳ ಪ್ರೀತಿ ಇರುತ್ತದೆ

ಚಿತ್ರದುರ್ಗ: ದೇಶ ವಿರೋಧಿ ಘೋಷಣೆ ಕೂಗಿದರೆ ಕಂಡಲ್ಲಿ ಗುಂಡಿಕ್ಕುವ ಕಾನೂನು ತರಬೇಕು ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

ಚಿತ್ರದುರ್ಗ ಮಾದಾರ ಚನ್ನಯ್ಯ ಶ್ರೀ ಹಾಗು ಮಡಿವಾಳ ಮಾಚಿ ದೇವಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಮೂಲ್ಯ ಲಿಯೋನಾ ಪಾಕಿಸ್ತಾನಕ್ಕೆ ಜೈ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಭಾರತ ದೇಶದ ಅನ್ನ, ನೀರು, ಗಾಳಿ ಸೇವಿಸಿ ದೇಶ ವಿರೋಧಿ ಘೋಷಣೆ ಹಾಕೋದು ಸರಿಯಲ್ಲ. ಹೀಗಾಗಿ ಅಂತವರನ್ನು ಗುಂಡಿಕ್ಕುವ ಕಾನೂನು ತರಲು ಪ್ರಧಾನಿಗೆ ಮನವಿ ಮಾಡುತ್ತೇನೆ ಎಂದರು.

ಇದೇ ವೇಳೆ ರಾಜ್ಯದಲ್ಲಿ ಕ್ಯಾಸಿನೊ ಮಾದರಿಯ ಜೂಜು ಅಡ್ಡೆಯನ್ನು ಜಾರಿಗೆ ತರುವುದಾಗಿ ಹೇಳಿರುವ ಸಚಿವ ಸಿಟಿ ರವಿ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಅಗತ್ಯ ಕ್ರಮ ಇದಾಗಿದೆ. ಅಲ್ಲದೆ ಪ್ರವಾಸೋದ್ಯಮ ಎಂಬುದು ಮಳೆ ಇಲ್ಲದ ಬೆಳೆ ಇದ್ದಂತೆ. ಹೀಗಾಗಿ ನಮ್ಮ ದೇಶದ ಅನೇಕರು ಶ್ರೀಲಂಕಾ, ಸಿಂಗಾಪುರಕ್ಕೆ ಹೋಗುತ್ತಾರೆ. ಅಲ್ಲಿ ಕ್ಯಾಸಿನೊ ಆಡಲು ನಮ್ಮ ದುಡ್ಡು ಹೋಗುತ್ತಿದ್ದು, ನಮ್ಮ ದೇಶಕ್ಕೆ ಕೊರತೆ ಆಗಲ್ವಾ. ಆದ್ದರಿಂದ ಈ ಯೋಜನೆ ಸ್ವಾಗತಾರ್ಹ. ಆದರೆ ಫುಡ್ ಟೂರಿಸಂ ಸೇರಿ ಇತರೆ ಹೇಳಿಕೆ ಬಿಟ್ಟು ಕ್ಯಾಸಿನೊ ಬಗ್ಗೆ ಮಾತ್ರ ಚರ್ಚೆ ಮಾಡುತ್ತಿರೋದು ವಿಪರ್ಯಾಸ ಎನಿಸಿದ್ದು, ಪ್ರವಾಸೋದ್ಯಮ ಹಾಗೂ ಆರ್ಥಿಕ ಸ್ಥಿತಿ ಅಭಿವೃದ್ಧಿಗಾಗಿ ಈ ಕ್ಯಾಸಿನೊ ಯೋಜನೆ ತರುತ್ತಿರೋದು ಸಹ ತಪ್ಪೇನಿಲ್ಲ ಎಂದು ಬಿ.ಸಿ ಪಾಟೀಲ್ ಸಮರ್ಥಿಸಿಕೊಂಡರು.

ಶಾಸಕ ಕುಮಟಳ್ಳಿ ಅವರಿಗೆ ಸೂಕ್ತ ಸ್ಥಾನಮಾನ ನೀಡದಿದ್ದರೆ ಸಚಿವ ರಮೇಶ್ ಜಾರಕಿಹೊಳಿ ಅವರ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಇಂಗಿತ ವ್ಯಕ್ತಪಡಿಸಿರುವ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಕುಮಟಳ್ಳಿ ಸಹ ನಮ್ಮಂತೆ ತ್ಯಾಗ ಮಾಡಿ ಬಂದಿದ್ದಾರೆ. ಕುಮಟಳ್ಳಿ ಅವರಿಗೂ ಸೂಕ್ತ ಸ್ಥಾನಮಾನ ನೀಡಬೇಕು. ಜಾರಕಿಹೊಳಿ ರಾಜೀನಾಮೆ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಕುಮಟಳ್ಳಿ ಅವರಿಗೆ ಅನ್ಯಾಯ ಆಗಬಾರದು ಎಂದು ಸಿಎಂಗೆ ಒತ್ತಾಯಿಸುತ್ತೇನೆ. ಅಲ್ಲದೆ ಸೋತವರಿಗೆ ಮಂತ್ರಿ ಸ್ಥಾನ ನೀಡಲು ಕಾನೂನು ತೊಡಕಿದ್ದು, ಸಿಎಂ ಜುಲೈ ವೇಳೆಗೆ ಅವರಿಗೂ ಸೂಕ್ತ ಸ್ಥಾನಮಾನ ನೀಡುವ ಭರವಸೆ ಇದೆ ಎಂದರು.

ಇದೇ ವೇಳೆ ಬಿ.ಸಿ ಪಾಟೀಲ್, ಬಿಜೆಪಿ ಅನೈತಿಕ ಕೂಸು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ರಚಿಸುವಾಗ 37 ಜನ ಶಾಸಕರಿದ್ದ ಜೆಡಿಎಸ್‍ಗೆ ಸಿಎಂ ಸ್ಥಾನ ನೀಡುವಾಗ ಅದು ಅನೈತಿಕತೆ ಅನ್ನಿಸಲಿಲ್ವಾ. ಅಧಿಕಾರಕ್ಕಾಗಿ ಹಿಂಬಾಗಿಲು, ಮುಂಬಾಗಿಲಿನಿಂದ ಯತ್ನಿಸಿ ಸರ್ಕಾರ ರಚಿಸಿದ ಅವರಿಗೆ ನೈತಿಕತೆ ಇರಲಿಲ್ವಾ ಎಂದು ಪ್ರಶ್ನಿಸಿದರು. ಅಲ್ಲದೆ ಅಧಿಕಾರವಿಲ್ಲದೇ ಸಿದ್ದರಾಮಯ್ಯ ಹತಾಶರಾಗಿ ಮಾತಾಡುತ್ತಿದ್ದಾರೆ. ಆದರೆ ನಮ್ಮಿಂದಾಗಿ ಸಿದ್ಧರಾಮಯ್ಯಗೆ ವಿಪಕ್ಷ ನಾಯಕ ಸ್ಥಾನ ಸಿಕ್ಕಿದೆ. ಅಲ್ಲದೆ ಸರ್ಕಾರದ ಕಾರು, ಬಂಗಲೆ ಇಲ್ಲದೆ ಯಾರದೋ ಹೆಸರಿನ ಬಂಗಲೆಯಲ್ಲಿ ವಾಸವಾಗಿದ್ದ ಅವರಿಗೆ ನಮ್ಮ ತ್ಯಾಗದಿಂದ ಸ್ಥಾನಮಾನ ಸಿಕ್ಕಿದೆ ಎಂದರು.

ನಮ್ಮನ್ನು ಮಾಜಿ ಸಿಎಂ ಸಿದ್ಧರಾಮಯ್ಯ ನೆನೆಸಿಕೊಳ್ಳಬೇಕು. ಜೊತೆಗೆ ಅವರಿಗೆ ನಮ್ಮ ಮೇಲೆ ಮನದಲ್ಲಿ ಬಹಳ ಪ್ರೀತಿ ಇರುತ್ತದೆ ವಿಪಕ್ಷ ನಾಯಕರೆಂಬ ಕಾರಣಕ್ಕೆ ಹೀಗೆ ನಮ್ಮ ಬಗ್ಗೆ ಮಾತಾಡ್ತಿದ್ದು, ಅವರು ಹಾಗೆ ಮಾತನಾಡದಿದ್ದರೆ ವಿಪಕ್ಷ ಸ್ಥಾನವನ್ನು ಸಹ ಕಿತ್ತುಕೊಂಡರೆ ಕಷ್ಟವಾಗುತ್ತೆ ಎಂದು ವ್ಯಂಗ್ಯವಾಡಿದರು.

Comments

Leave a Reply

Your email address will not be published. Required fields are marked *