ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು, ಓರ್ವ ಸಹಚರನನ್ನು ಸದೆಬಡಿದ ಸೇನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಇಂದು ಇಬ್ಬರು ಉಗ್ರರು ಹಾಗೂ ಓರ್ವ ಸಹಚರನನ್ನು ಭಾರತೀಯ ಸೇನಾಪಡೆ ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದೆ.

ಪುಲ್ವಾಮಾ ಜಿಲ್ಲೆಯ ಅವಂತಿಪೋರಾದ ಗೋರಿಪೋರಾ ಪ್ರದೇಶದಲ್ಲಿ ಈ ಎನ್‍ಕೌಂಟರ್ ಮಾಡಲಾಗಿದೆ. ಗೋರಿಪೋರಾದಲ್ಲಿ ಉಗ್ರರು ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ ಸೇನಾಪಡೆಗಳು ಇಂದು ಬೆಳಗಿನ ಜಾವ ಕಾರ್ಯಾಚರಣೆ ಆರಂಭಿಸಿತ್ತು. ಈ ಬಗ್ಗೆ ತಿಳಿದ ಉಗ್ರರು ಸೇನಾಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದು, ಇದಕ್ಕೆ ಪ್ರತ್ಯುತ್ತರವಾಗಿ ಸೇನಾಪಡೆಗಳು ಕೂಡ ದಾಳಿ ನಡೆಸಿದೆ.

ಈ ವೇಳೆ ಕಾರ್ಯಾಚರಣೆಯನ್ನು ಎನ್‍ಕೌಂಟರ್ ಆಗಿ ಸೇನಾಪಡೆಗಳು ಮಾರ್ಪಡಿಸಿ ಇಬ್ಬರು ಉಗ್ರರು, ಓರ್ವ ಸಹಚರ ಸೇರಿದಂತೆ ಮೂವರಿಗೆ ಗುಂಡಿಕ್ಕಿ ಹೊಡೆದುರುಳಿಸಿದೆ. ಅಲ್ಲದೇ ದಾಳಿ ನಡೆದ ಸ್ಥಳದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮತ್ತಷ್ಟು ಉಗ್ರರು ಅಡಗಿ ಕುಳಿತಿರುವ ಶಂಕೆ ವ್ಯಕ್ತವಾಗಿದ್ದು, ಸೇನಾಪಡೆ ಕಾರ್ಯಾಚರಣೆ ಮುಂದುವರಿಸಿದೆ.

ಕೊರೊನಾ ಭೀತಿಗೆ ಇಡೀ ದೇಶವನ್ನೆ ಲಾಕ್‍ಡೌನ್ ಮಾಡಲಾಗಿದೆ. ಆದರೆ ಈ ಮಧ್ಯೆ ಉಗ್ರರ ಅಟ್ಟಹಾಸ ಮಾತ್ರ ಕಡಿಮೆ ಆಗಿಲ್ಲ. ಲಾಕ್‍ಡೌನ್ ಅವಧಿಯಲ್ಲಿ ಸಾಕಷ್ಟು ಭಾರಿ ಉಗ್ರರು ಭಾರತೀಯ ಸೇನೆ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಹಲವು ಉಗ್ರರನ್ನು ಸದೆಬಡಿಯಲಾಗಿದೆ.

ಅಲ್ಲದೇ ಕೆಲ ದಿನಗಳ ಹಿಂದೆ ಸೊಪೋರ್ ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ 23 ವರ್ಷದ ಜೈಷ್-ಇ-ಮೊಹ್ಮದ್ ಉಗ್ರ ಸಂಘಟನೆಯ ಕಮಾಂಡರ್ ಸೇನೆಯ ಗುಂಡೇಟಿಗೆ ಹತನಾಗಿದ್ದನು. ಈತ 2018ರಿಂದ ಭಯೋತ್ಪಾದನೆಯಲ್ಲಿ ಸಕ್ರಿಯನಾಗಿದ್ದ ಎಂದು ಪೊಲೀಸರು ತಿಳಿಸಿದ್ದರು.

Comments

Leave a Reply

Your email address will not be published. Required fields are marked *